ದೇಹದ ಆರೋಗ್ಯವೇ ದೇಶದ ನಿಜವಾದ ಸಂಪತ್ತು: ಸಿದ್ದಲಿಂಗ ಶ್ರೀ

ಗ್ರಾಮೀಣ

ಚಿತ್ತಾಪುರ: ಭಗವಂತ ಸುಂದರವಾದ ದೇಹವನ್ನು ಕೊಟ್ಟಿದ್ದಾನೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ದೇಹವನ್ನು ಸದೃಢ ಮಾಡಿಕೊಳ್ಳಬೇಕು. ದೇಹದ ಆರೋಗ್ಯವೇ ದೇಶದ ನಿಜವಾದ ಸಂಪತ್ತು ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಸಮೀಪದ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ದಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವ್ಯಸನ ಮುಕ್ತ ದಿನಾಚರಣೆ’ ಉದ್ದೇಶಿಸಿ ಮಾತನಾಡಿದ ಅವರು, ಇಳಕಲ್ ಮಹಾoತ ಶಿವಯೋಗಿಗಳು ಮಹಾಂತ ಜೋಳಿಗೆ ಮೂಲಕ ಜನರನ್ನು ವ್ಯಸನದಿಂದ ದೂರವಿಡುವ ಪ್ರಯತ್ನ ಮಾಡಿದರು. ವಿವಿಧ ಚಟಗಳಿಂದ ನಿತ್ಯ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಬರಿ ಚಟ ಮಾಡುವವರು ಮಾತ್ರ ಸಾಯುತ್ತಿಲ್ಲ, ಬದಲಾಗಿ ಅವರನ್ನು ನಂಬಿರುವ ತಂದೆ ತಾಯಿ, ಹೆಂಡತಿ, ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ತಂದೆ ತಾಯಿಗಳಿಂದ ಯಾವ ಊಡುಗಡೆ ಬೇಡ ಬದಲಾಗಿ ತಮಗಿರುವ ವ್ಯಸನ ಚಟ ಬಿಡಲು ತಿಳಿಸಿ. ವ್ಯಸನದಿಂದ ದೂರವಿರುವ ಮೂಲಕ ಸ್ವಾಸ್ತ್ಯ ಸಮಾಜಕ್ಕೆ ನಾವೆಲ್ಲರು ಪಣತೊಡೋಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ, ವ್ಯಸನ ಮತ್ತು ಅವುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜನಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸ ಮಾಡುವುದು ಅಗತ್ಯವಾಗಿದೆ. ನಮ್ಮ ದೇಹವೇ ನಮ್ಮ ಅಮೂಲ್ಯ ಸಂಪತ್ತು, ಉತ್ತಮ ಹವ್ಯಾಸಗಳ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.

ವ್ಯಸನ ಮುಕ್ತ ದಿನದ ಅಂಗವಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪೂಜ್ಯರು ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಪ್ರಕಲ್ಪಗಳ ಮುಖ್ಯಸ್ಥರಾದ ಈಶ್ವರಗೌಡ ಪಾಟೀಲ, ಗಂಗಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಬೊಮ್ಮನಳ್ಳಿ, ಕಾವೇರಿ ಮಡಿವಾಳ ಸೇರಿದಂತೆ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *