ವಚನಗಳ ಅಳವಡಿಕೆಯಿಂದ ಆಂತರಿಕ ಕತ್ತಲೆ ದೂರ

ನಗರದ

ಕಲಬುರಗಿ: ದೀಪಗಳು ಬೆಳಕನ್ನು ನೀಡಿ ಹೊರಗಿನ ಕತ್ತಲೆಯನ್ನು ಕಳೆಯುತ್ತವೆ. ಬಸವಾದಿ ಶರಣರು ರಚಿಸಿರುವ ವಚನಗಳ ಅಧ್ಯಯನ ಮಾಡಿ, ಅದರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಜ್ಞಾನ, ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ, ಶೋಷಣೆ, ಅಸಮಾನತೆ ಭಾವನೆ ಎಂಬ ಆಂತರಿಕ ಕತ್ತಲೆ ದೂರವಾಗಿ ಬದುಕು ಸುಂದರವಾಗುತ್ತದೆ ಎಂದು ಶರಣ ಚಿಂತಕ ರವೀಂದ್ರ ಶಾಬಾದಿ ಅಭಿಮತಪಟ್ಟರು.

ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ವಚನ-ದೀಪೋತ್ಸವ ವಿಶೇಷ ಕಾರ್ಯಕ್ರಮ’ದಲ್ಲಿ ವಿದ್ಯಾರ್ಥಿಗಳಿಗೆ ವಚನಗಳ ಪುಸ್ತಕ ವಿತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ಸಾಮಾಜಿಕ ಪರಿವರ್ತನೆಯ ಶಕ್ತಿಯುತ ಸಂವಹನ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ ಎಂದರು.

ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಮಾನವನ ಜೀವನದ ಸಾರ್ಥಕತೆಗೆ ವಚನಗಳು ಪೂರಕವಾಗಿವೆ. ವಿದ್ಯಾರ್ಥಿ ದಿಸೆಯಿಂದಲೇ ವಚನಗಳ ಅಧ್ಯಯನ ಮಾಡಬೇಕು. ವಚನಗಳ ಅಧ್ಯಯನದಿಂದ ಆತ್ಮವಿಶ್ವಾಸ, ಧೈರ್ಯ, ಛಲಗಾರಿಕೆ, ಏಕಾಗ್ರತೆ, ಸೇವಾ ಮನೋಭಾವನೆ, ಸಾಧನಾ ಮಾರ್ಗ ತಿಳಿಸುತ್ತವೆ. ವಚನಗಳಲ್ಲಿ ಜೀವನ, ನೈತಿಕ, ಮಾನವೀಯ ಮೌಲ್ಯಗಳಿವೆ. ಸಮಾನತೆ, ಕಾಯಕ, ದಾಸೋಹ ಪ್ರಜ್ಞೆ ಸಾರುತ್ತವೆ. ಜಗತ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ ವಿಶ್ವಗುರು ಬಸವಣ್ಣ ಮತ್ತು ಶರಣರ ಕೊಡುಗೆ ಅನನ್ಯವಾಗಿದೆ. ಶರಣ ತತ್ವದಲ್ಲಿ ದೀಪಾವಳಿಯು ವಚನಗಳ ಬೆಳಕನ್ನು ಸಾರುವ ಮತ್ತು ಚನ್ನಬಸವಣ್ಣನವರ ಜಯಂತಿಯ ಆಚರಣೆ ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ, ಶಿಕ್ಷಕಿಯರಾದ ಪ್ರೀಯಾಂಕಾ, ಪ್ರೀತಿ ಜೆ.ಬಿ, ಪ್ರೀತಿ ಆರ್.ಎಸ್, ಶಿಲ್ಪಾ, ಖಮರುನ್ನೀಸ್ ಬೇಗಂ, ವರ್ಷಾರಾಣಿ, ಚಂದ್ರಲೇಖಾ, ಸೇವಕಿಯರಾದ ನಾಗಮ್ಮ, ಸುನಿತಾ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *