ಕಲಬುರಗಿ: ತಮ್ಮ ಜೀವವನ್ನು ಲೆಕ್ಕಿಸದೆ ರೋಗಿಯನ್ನು ಉಪಚರಿಸಿ ಜೀವ ಉಳಿಸುವ ವೈದ್ಯರ ಸೇವೆ ಅಮೂಲ್ಯ ಎಂದು ಸಮಾಜಮುಖಿ ವೈದ್ಯ ಡಾ.ವಿ.ಬಿ ಮಠಪತಿ ಮಾರ್ಮಿಕವಾಗಿ ಹೇಳಿದರು.
ನಗರದ ಹುಮನಾಬಾದ್ ರಿಂಗ್ ರಸ್ತೆಯ ನಿಜಾಮಪುರ ಬಡಾವಣೆಯ ಮಠಪತಿ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಸಂಜೆ ಜರುಗಿದ ‘ಸಮಾಜಮುಖಿ ವೈದ್ಯರಿಗೆ ಗೌರವ’ ಕಾರ್ಯಕ್ರಮದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ವೈದ್ಯರು ತಮ್ಮ ಕ್ಷೇತ್ರವನ್ನು ವಾಣಿಜ್ಯ ದೃಷ್ಟಿಯಿಂದ ನೋಡದೆ, ಸಮಾಜ ಸೇವೆಯೆಂದು ಭಾವಿಸಿ, ರೋಗಿಯನ್ನು ಉಪಚರಿಸುವ ಸಮಾಜಮುಖಿ ವೈದ್ಯರು ದೇಶದ ಅಮೂಲ್ಯ ಆಸ್ತಿಯಾಗುತ್ತಾರೆ ಎಂದರು.
ಸಮಾಜ ಸೇವಕ ಎಚ್.ಬಿ ಪಾಟೀಲ್ ಮಾತನಾಡಿ, ಡಾ.ಮಠಪತಿಯವರು ಸಮಾಜಮುಖಿ ವೈದ್ಯರಾಗಿದ್ದಾರೆ. ಅತಿ ಕಡಿಮೆ ಶುಲ್ಕದಲ್ಲಿ ರೋಗಿಗಳನ್ನು ಕಾಳಜಿಯಿಂದ ಗುಣಪಡಿಸುತ್ತಾರೆ. ಅನೇಕ ಉಚಿತ ತಪಾಸಣೆ ಶಿಬಿರದಲ್ಲಿ ಉಚಿತವಾಗಿ ಸೇವೆಯನ್ನು ನೀಡುವುದರ ಜೊತೆಗೆ, ಔಷಧಿಯನ್ನು ವಿತರಿಸಿರುವುದು ಗಮನಸಿದರೆ, ಅರವಲ್ಲಿರುವ ಸಮಾಜಪರ ಕಾಳಜಿ ನಮಗೆ ತಿಳಿಯುತ್ತದೆ. ಇಂತಹ ಅಪರೂಪದ ವೈದ್ಯರು ಹೆಚ್ಚಾಗಬೇಕಾಗಿದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಬಡಾವಣೆಯ ಪ್ರಮುಖರಾದ ಗಣಪತಿ ಪಾಟೀಲ್, ಪಾಶಾ ಶೇಖ್, ಅನ್ವರ್ ಪಟೇಲ್, ಶೇಖ್ ಹನೀಫ್, ಮೊಹಮ್ಮದ್ ಪಾಶಾ, ಅಣವೀರಯ್ಯ ಸ್ವಾಮಿ, ಮೊಹಮ್ಮದ್ ನಜೀರ್, ವಾಶೀಮ್ ಅಕ್ರಮ ಸೇರಿದಂತೆ ಅನೇಕರು ಇದ್ದರು.