ಕಲಬುರಗಿ: ಸಮಾಜದಲ್ಲಿರುವ ತಳಮಟ್ಟದ ಸಮುದಾಯ, ಅಸಹಾಯಕರು, ಧ್ವನಿಯಿಲ್ಲದವರ ಬಗ್ಗೆ ತಮ್ಮ ಆಳವಾದ ಚಿಂತನೆಯ ಸಾಹಿತ್ಯದ ಮೂಲಕ ಸಮಾಜವನ್ನು ಜಾಗೃತಗೊಳಿಸುತ್ತಿರುವ ಬಂಡಾಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪನವರು ಶ್ರೇಷ್ಠ ಚಿಂತಕ, ಲೇಖಕ, ಕಾದಂಬರಿಕಾರರಾಗಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ಸಮೀಪದ ಸನಲೈಟ್ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಡಾ.ಬರಗೂರು ರಾಮಚಂದ್ರಪ್ಪನವರ 79ನೇ ಜನ್ಮ ದಿನಾಚರಣೆ’ಯ ಪ್ರಯುಕ್ತ ಬರಗೂರ್‌ರ ಬದುಕು-ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬರಗೂರು ಅವರಲ್ಲಿರುವ ಸಮಾಜಪರ ಕಾಳಜಿ, ವೈಚಾರಿಕ ಪ್ರಜ್ಞೆ ಶ್ಲಾಘನೀಯವಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿ, ಆ ಬಳಿಕ ಎರಡು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಕನ್ನಡನಾಡಿನ ಪ್ರಮುಖ ಚಿಂತಕರು ಮತ್ತು ಬಂಡಾಯ ಸಾಹಿತ್ಯ ಚಳುವಳಿಯ ನೇತಾರರಲ್ಲಿ ಪ್ರಮುಖರಾಗಿದ್ದಾರೆ. ಅವರು ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕನಸಿನ ಕನ್ನಿಕೆ, ಮರಕುಟಿಗ, ನೆತ್ತರಲ್ಲಿ ನೆಂದು ಹೂವು, ಗುಲಾಮಗೀತೆ, ಮಗುವಿನ ಹಾಡು, ಕಾಂಟೆಸ್ಸಾದಲ್ಲಿ ಕಾವ್ಯ, ಸುಂಟರಗಾಳಿ, ಬಯಲಾಟ ಭೀಮಣ್ಣ, ಒಂದು ಊರಿನ ಕತೆಗಳು, ಕಪ್ಪು ನೆಲದ ಕೆಂಪುಕಾಲು, ಸೀಳು ನೆಲ, ಸಂಗಪ್ಪನ ಸಾಹಸಗಳು, ಬೆಂಕಿ, ಸೂರ್ಯ, ಭರತ ನಗರಿ, ಕೋಟೆ, ಗಾಜಿನ ಮನೆ, ಸ್ವಪ್ನ ಮಂಟಪ, ಶಬರಿ ಸೇರಿದಂತೆ ಇನ್ನಿತರ ಕೃತಿಗಳನ್ನು ರಚಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕರಾದ ಅಸ್ಲಾಂ ಶೇಖ್, ಸೈಯದ್ ಹಮೀದ್ ಮತ್ತು ವಿದ್ಯಾರ್ಥಿಗಳು ಇದ್ದರು.