ಮಾನವ ಬಂಡವಾಳ ನಿರ್ಮಾಣಕ್ಕಾಗಿ ವಲಸೆಗೆ ಪ್ರೋತ್ಸಾಹ ಅಗತ್ಯ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ನಿರುದ್ಯೋಗದ ಸಮಸ್ಯೆ ನಿವಾರಣೆಗೆ ಮತ್ತು ಮಾನವ ಬಂಡವಾಳ ನಿರ್ಮಾಣಕ್ಕೆ ವಲಸೆಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಅಭಿಮತಪಟ್ಟರು.

ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ ವಲಸೆ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಜನಸಂಖ್ಯೆ ಹಂಚಿಕೆಯ ಪ್ರಮಾಣ ಗಮನಿಸಿದರೆ ಸಮ ಪ್ರಮಾಣದಲ್ಲಿ ಹಂಚಿಕೆಯಾಗಿಲ್ಲ. ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮತ್ತು ಇನ್ನೂ ಕೆಲವು ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಜನಸಂಖ್ಯೆ ಕಂಡುಬರುತ್ತದೆ. ಎಲ್ಲಾ ಜನರು ಒಂದೆಡೆ ನೆಲೆಸುವದರಿಂದ ಅಲ್ಲಿ ಉದ್ಯೋಗಗಳ ಪ್ರಮಾಣ ಕಡಿಮೆಯಾಗುತ್ತದೆ ಎಂದರು.

ಜನರು ಉದ್ಯೋಗ ಮತ್ತು ಹೆಚ್ಚಿನ ವೇತನ ಅರಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಾರೆ. ಎಂಜಿನಿಯರರು, ವೈದ್ಯರು, ವ್ಯವಸ್ಥಾಪಕರಂತಹ ತಾಂತ್ರಿಕ ಅರ್ಹತೆಯುಳ್ಳ ವ್ಯಕ್ತಿಗಳು ಹೆಚ್ಚಿನ ವೇತನ ಪಡೆಯುವುದಕ್ಕಾಗಿ ಇತರೆ ದೇಶಗಳಿಗೆ ವಲಸೆ ಹೋಗುತ್ತಾರೆ. ಆಂತರಿಕ ಮತ್ತು ಬಾಹ್ಯ ವಲಸೆಗಳೆರಡು ಸಾರಿಗೆ ವೆಚ್ಚ, ವಲಸೆ ಹೋದ ಪ್ರದೇಶಳಲ್ಲಿನ ಅಧಿಕ ಜೀವನ ವೆಚ್ಚ ಮತ್ತು ಅಪರಿಚಿತ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶಗಳಲ್ಲಿ ಬದುಕುವ ಮಾನಸಿಕ ವೆಚ್ಚ ಒಳಗೊಂಡಿದೆ. ಹೊಸ ಸ್ಥಳಗಳಲ್ಲಿನ ಅಧಿಕಗೊಂಡ ಗಳಿಕೆಯು ವಲಸೆಯ ವೆಚ್ಚಗಳಿಗಿಂತ ಹೆಚ್ಚಾಗಿರುತ್ತದೆ. ಆದ್ದರಿಂದ ವಲಸೆ ಮೇಲಿನ ವೆಚ್ಚವು ಸಹ ಮನವ ಬಂಡವಾಳ ನಿರ್ಮಾಣದ ಮೂಲವಾಗಿದೆ ಎಂದರು.

ತೆರಿಗೆ ಸಲಹೆಗಾರ ಅಂಬರಿಷ್ ಬಿರಾದಾರ ವಲಸೆಯ ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ದತ್ತು ಹಡಪದ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಫಿರೋಜ್ ನದಾಫ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *