ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿ ಆಚರಣೆ, ಅಟಲ್ ಸ್ಮೃತಿ ವರ್ಷ ಮತ್ತು ಸುಶಾಸನ ದಿನ ಕಾರ್ಯಕ್ರಮ ಆಚರಿಸಲಾಯಿತು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ,
ಭಾರತದ ಸಂಸ್ಕೃತಿ ಹಾಗೂ ಪರಂಪರೆ ಧರ್ಮದ ತಳಹದಿಯ ಮೇಲೆ ನಿಂತಿದೆ. ಧರ್ಮವನ್ನು ಅತ್ಯಂತ ಭಕ್ತಿ – ಭಾವದಿಂದ ಅನುಸರಿಸಿದ ಭೂಮಿ ಯಾವುದಾದರೂ ಇದ್ದರೆ ಅದು ಭರತ ಭೂಮಿ ಎಂದು ಸದಾ ಭಾಷಣದಲ್ಲಿ ವಾಜಪೇಯಿ ಹೇಳುತ್ತಿದ್ದರು ಎಂದರು.
ದೇಶ ಭಕ್ತಿ, ಧರ್ಮಾಭಿಮಾನದ ಮಾತು ವಾಜಪೇಯಿ ಅವರು ನೆನಪಿಗೆ ಬಂದ ತಕ್ಷಣ ಕೋಟ್ಯಾಂತರ ಕಾರ್ಯಕರ್ತರ ಮನದಲ್ಲಿ ರಾಷ್ಟ್ರಪ್ರೇಮದ ಕಿಚ್ಚು ಇಮ್ಮಡಿಸುತ್ತದೆ ಎಂದರು.
ಭಾರತ ಇಂದು ಬಲಿಷ್ಠವಾಗಿ ನಿಂತು, ಜಾಗತಿಕ ಮುಂಚೂಣಿಯಲ್ಲಿ ಅಗ್ರಸ್ಥಾನ ಪಡೆದಿದೆ, ನರೇಂದ್ರ ಮೋದಿ ಅವರ ಶ್ರಮ, ಸಾರ್ಥಕತೆಯ ಕ್ಷಣ ಅನುಭವಿಸುತ್ತಿದ್ದರೆ ಅದು ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಟ್ಟಲು ಹಾಕಿದ ಭದ್ರ ಬುನಾದಿಯ ತಳಹದಿಯ ಪ್ರತಿಫಲ ಎನ್ನುವುದು ಸ್ವತಃ ಮೋದಿ ಅವರೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದು ನೋಡಿದರೆ ಅಟಲ್’ಜಿ ಅವರ ದೂರದೃಷ್ಟಿ, ಕನಸಿನ ಭಾರತ ನಮಗೆ ಗೊಚರಿಸುತ್ತಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ,
ಭಾರತರತ್ನ ವಾಜಪೇಯಿ ಅವರು ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಸಮರ್ಥ ನೇತೃತ್ವ ವಹಿಸುವ ಜೊತೆಗೆ ಗ್ರಾಮ ಸಡಕ್ ಯೋಜನೆಯಂತಹ ಜನೋಪಯೋಗಿ ಯೋಜನೆ ಜಾರಿಗೆ ತಂದು ಭಾರತವನ್ನು 21ನೇ ಶತಮಾನದಲ್ಲಿ ಮುನ್ನಡೆಗೆ ತಂದು ನಿಲ್ಲಿಸಿದ್ದರು. ಅವರ ಜೀವನ, ಸಾಧನೆ ಜೊತೆಗೆ ಭಾರತದ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದರು, ಪ್ರಧಾನಿಯಾಗಿ ನಡೆಸಿದ ಉತ್ತಮ ಆಡಳಿತ ಇಡಿ ದೇಶ ಇಂದಿಗೂ ಹೆಮ್ಮೆ ಪಡುತ್ತಿದೆ ಎಂದರು.
ಯುವ ಮುಖಂಡ ವಿಠಲ ನಾಯಕ ಅವರು ಅಟಲ್ ಬಿಹಾರಿ ವಾಜಪೇಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಶರಣಗೌಡ ಚಾಮನೂರ, ಭೀಮರಾವ ದೊರೆ, ನಿರ್ಮಲ ಇಂಡಿ, ಯಂಕಮ್ಮ ಗೌಡಗಾಂವ, ವಿಶಾಲ ನಿಂಬರ್ಗಾ ಮತ್ತು ರತ್ನಪ್ಪ ಬಾಳಗಿ ಸೇರಿದಂತೆ ಅನೇಕರು ಇದ್ದರು.