ಕಲಬುರಗಿ: ಡಾ.ಫ.ಗು ಹಳಕಟ್ಟಿಯವರ ಜೀವನ-ಸಾಧನೆ-ಕೊಡುಗೆಯನ್ನು ಶಾಲಾ-ಕಾಲೇಜುಗಳ ಪಠ್ಯದಲ್ಲಿ ಸೇರ್ಪಡೆಗೊಳ್ಳಬೇಕು ಎಂದು ಶರಣ ಚಿಂತಕ ಡಾ.ರಾಜಶೇಖರ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಡಾ.ಫ.ಗು ಹಳಕಟ್ಟಿಯವರ 145ನೇ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಅದ್ಭುತ ಬದುಕನ್ನು ಕಟ್ಟಿಕೊಡುವ ಶ್ರೇಷ್ಠವಾದದ್ದು ವಚನ ಸಾಹಿತ್ಯವಾಗಿದೆ. ತಮ್ಮ ಆಸ್ತಿಯನ್ನು ಮಾರಾಟ ಮಾಡಿ, ಮುದ್ರಣ ಘಟಕ ಸ್ಥಾಪಿಸಿ, ವಚನಗಳನ್ನು ಮುದ್ರಿಸಿ ಮುಂದಿನ ಜನಾಂಗಕ್ಕೆ ದೊರೆಯುವಂತೆ ಮಾಡಿದರು ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ಹಳಕಟ್ಟಿಯವರ ಸ್ಮರಣೆಯಲ್ಲಿಯೇ ಒಂದು ದೊಡ್ಡ ಅನುಭವವಿದೆ. ಅಂದಿನ ಕ್ಲಿಷ್ಟಕರ ಪರಿಸ್ಥಿಯಲ್ಲಿ ವಿನಾಶದ ಅಂಚಿನಲ್ಲಿದ್ದ ವಚನಗಳ ಹಸ್ತಪ್ರತಿಗಳನ್ನು ಸಂರಕ್ಷಿಸಿ, ಪ್ರಕಟಿಸಿ ಪ್ರಚಾರಗೊಳಿಸುವ ಮೂಲಕ ಅಮೂಲ್ಯವಾದ ವಚನ ಸಂಪತ್ತನ್ನು ದೊರೆಯುವಂತೆ ಮಾಡುವ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಹಳಕಟ್ಟಿಯವರ ಕೊಡುಗೆಯ ಬಗ್ಗೆ ಎಲ್ಲೆಡೆ ಪ್ರಚುರಪಡಿಸುವ ಕಾರ್ಯವಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ದತ್ತು ಹಡಪದ, ಸಮಾಜ ಸೇವಕ ದಯಾನಂದ ಆರ್ ಮಠಪತಿ ನರೋಣಾ, ಪ್ರಮುಖರಾದ ಭೀಮರಾಯ ಎಸ್ ಮುಂಡರಗಿ, ಇಮ್ತಿಯಾಜ್ ಕಾಚೂರ, ಮಹೇಶ ಲೋಣಿ, ರಿಹಾನ್ ವಾಡಿ, ಉಮರ ಪಟೇಲ್, ಸೌಂದರ್ಯ ತೋಳೆ ಮತ್ತು ವಿದ್ಯಾರ್ಥಿಗಳು ಇದ್ದರು.