ಕಲಬುರಗಿ: ಎಲ್ಲರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಕಾಯಿಲೆಗಳಿಂದ ದೂರವಿರಬಹುದಾಗಿದೆ. ಆರೋಗ್ಯವೇ ಮನುಷ್ಯನ ದೊಡ್ಡ ಸಂಪತ್ತಾಗಿದ್ದು, ಅದನ್ನು ಕಾಪಾಡಿಕೊಳ್ಳಬೇಕು ಎಂದು ತಜ್ಞ ವೈದ್ಯ ಡಾ.ಅಂಕಿತ್ ಆರ್ ಕದರ್ಗಿ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಕೆ.ಎಚ್.ಬಿ ಗ್ರೀನ್ ಪಾರ್ಕನ ಹನುಮಾನ ದೇವಸ್ಥಾನದ ಆವರಣದಲ್ಲಿ ಆಯುಸಿಂಕ್ ಮೆಡಿಕಲ್ ಕಂಪನಿ ಮತ್ತು ಬಡಾವಣೆಯ ಜಂಟಿ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಒಂದು ದಿನದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಆರೋಗ್ಯ ಕಳೆದುಕೊಂಡು ಬೇರೆಲ್ಲಾ ಸಂಪತ್ತು ಗಳಿಸಿದರೂ ವ್ಯರ್ಥ. ಪ್ರಸ್ತುತ ದಿನಗಳಲ್ಲಿ ನಾವು ಆರೋಗ್ಯದತ್ತ ಗಮನಹರಿಸದೆ, ಅನಾರೋಗ್ಯಕರ ಜೀವನಶೈಲಿಯಲ್ಲಿದ್ದಾರೆ. ಆದ್ದರಿಂದ ಅನೇಕ ಕಾಯಿಲೆಗಳು ಉಂಟಾಗುತ್ತಿವೆ ಎಂದರು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ಎಚ್.ಬಿ ಗ್ರೀನ್ ಪಾರ್ಕ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ಸಂಜೀವಕುಮಾರ ಶೆಟ್ಟಿ ಮತ್ತು ಸಿಪಿಐ ಶ್ರೀಶೈಲ್ ತಾರದಾಳ, ಪೌಷ್ಠಿಕಾಂಶಗಳುಳ್ಳ ಆಹಾರ ಸೇವನೆ, ಶುದ್ಧವಾದ ನೀರನ್ನು ಕುಡಿಯುವುದು, ದಿನಕ್ಕೆ 7-8 ಗಂಟೆಗಳ ಕಾಲ ನಿದ್ರೆ, ನಿಯಮಿತವಾಗಿ ವ್ಯಾಯಾಮ, ಯೋಗ ಮಾಡುವುದು, ಸಕಾರಾತ್ಮಕ ಚಿಂತನೆಯಂತಹ ಆರೋಗ್ಯಕರ ಜೀನವಶೈಲಿ ಅಳವಡಿಸಿಕೊಳ್ಳಬೇಕಾಗಿದೆ. ಏನಾದರೂ ಸಮಸ್ಯೆ ಕಂಡುಬಂದರೆ ಸ್ವಂತ ವೈದ್ಯರಾಗದೆ, ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಆಯುಸಿಂಕ್ ಕಂಪನಿಯ ಸಮಾಜಪರ ಕಾಳಜಿ ಶ್ಲಾಘನೀಯವಾಗಿದೆ ಎಂದರು.
ಆಯುಸಿಂಕ್ ಮೆಡಿಕಲ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಓ ಆದರ್ಶ ಕೆ ಮಾತನಾಡಿ, ನಮ್ಮ ಕಂಪನಿಯು ರಾಜ್ಯದೆಲ್ಲೆಡೆ ಸಂಚರಿಸಿ ಬೃಹತ್ ಉಚಿತ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಆರೋಗ್ಯಯುತ ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಜನರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ 12 ಜನರ ವೈದ್ಯರು ಮತ್ತು ಸಿಬ್ಬಂದಿಯ ತಂಡದಿಂದ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ 400ಕ್ಕೂ ಹೆಚ್ಚು ಬಡಾವಣೆಯ ಜನರಿಗೆ ರಕ್ತದೊತ್ತಡ, ಮದುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಕೊಲೆಸ್ಟ್ರಾಲ್ ಪರೀಕ್ಷೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ತಪಾಸಣೆ ಮಾಡಲಾಯಿತು.
ಶಿಬಿರದಲ್ಲಿ ಆಯುಸಿಂಕ್ ಮೆಡಿಕಲ್ ಕಂಪನಿಯ ಸೌರಭ ಪಾಂಡೆ, ಶ್ರೇಯಸ್ ಎಸ್, ವಿಜಿಮಾಲ್ ಎಸ್, ಸ್ನೇಹಾ, ರಂಜಿತ್, ಸೌರಭ, ಹರಿತಾ, ಸಾನಿಯಾ, ಸೈನಾ, ರಿಪಾ, ಅಂಕಿತ್, ಶೌಕತ್, ಶಮೀನಾ, ಡಾ.ವಿಜಯಶ್ರೀ, ಯೋಗೇಶ್, ನವಾಜ್ ಅವರು ತಪಾಸಣೆ ಮಾಡಿದರು.
ಸಮಾಜ ಸೇವಕರಾದ ಎಚ್.ಬಿ ಪಾಟೀಲ, ಶಿವಯೋಗೆಪ್ಪಾ ಎಸ್.ಬಿರಾದಾರ, ಕ್ಷೇಮಾಭಿವೃದ್ಧಿ ಸಂಗದ ಉಪಾಧ್ಯಕ್ಷ ಬಾಲಕೃಷ್ಣ ಕುಲಕರ್ಣಿ, ಬಡಾವಣೆಯ ಸಂಗಮೇಶ್ವರ ಸರಡಗಿ, ರಾಜಕುಮಾರ ಕದರ್ಗಿ, ಬಸವರಾಜ ಹೆಳವರ ಯಾಳಗಿ, ವಿರೇಶ್ ಬೋಳಶೆಟ್ಟಿ ನರೋಣಾ, ಮಲ್ಲಿನಾಥ ಮುನ್ನಳ್ಳಿ, ಶಿವಕಾಂತ ಚಿಮ್ಮಾ, ವೀರಯ್ಯ ಹಿರೇಮಠ, ಶ್ರೀನಿವಾಸ ಬುಜ್ಜಿ ಸೇರಿದಂತೆ ಅನೇಕರು ಇದ್ದರು.