ಶಾಂತಿಯುತ ವಾತಾವರಣ ನಿರ್ಮಾಣ ಸರ್ವರ ಜವಾಬ್ದಾರಿ: ಎಚ್.ಬಿ ಪಾಟೀಲ

ನಗರದ

ಕಲಬುರಗಿ: ಪ್ರತಿಯೊಬ್ಬರು ಸೃಷ್ಟಿಕೃತನ ಮಕ್ಕಳು, ನಾವೆಲ್ಲರು ಒಂದೆ ಎಂಬ ಭಾವನೆ ಮೂಡಬೇಕು. ಎಲ್ಲೆಡೆ ಶಾಂತಿಯುತ ವಾತಾವರಣ ನಿರ್ಮಾಣ ಮಾಡುವುದು ಸರ್ವರ ಜವಾಬ್ದಾರಿಯಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.

ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಸಮೀಪದ ಚಿಗುರು ನಿರ್ಗತಿಕ ಮತ್ತು ಅನಾಥ ಮಕ್ಕಳ ನಿಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಭಾನುವಾರ ಜರುಗಿದ ‘ಅಂತಾರಾಷ್ಟ್ರೀಯ ಶಾಂತಿ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಇಡಿ ಜಗತ್ತೆ ಶಾಂತಿಯ ಮಂತ್ರ ಪಠಿಸಬೇಕಾಗಿದೆ. ಭಯೋತ್ಪಾದನೆ, ವೈಷಮ್ಯ, ಕೊಲೆ, ಸುಲಿಗೆ, ಭ್ರಷ್ಟಾಚಾರದಂತಹ ಅನೀತಿಗಳಿಂದ ಜಗತ್ತಿನಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತಿದೆ ಎಂದರು.

‘ಶಾಂತಿ’ ಎಂಬುದು ಕೇವಲ ಎರಡಕ್ಷರದ ಶಬ್ದವಲ್ಲ, ಅದರಲ್ಲಿ ಬಹುದೊಡ್ಡ ಶಕ್ತಿಯಿದೆ. ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿದ್ದ ಮಾನವ ತನಗೆ ಲಭ್ಯವಿರುವುದನ್ನು ಅನುಭವಿಸಿ ನೆಮ್ಮದಿ ಹಾಗೂ ಶಾಂತಿಯಿಂದ ಜೀವಿಸುವದನ್ನು ಬಿಟ್ಟು, ಮತ್ತೊಬ್ಬರ ಜೊತೆಗೆ ಹೋಲಿಕೆ ಮಾಡುತ್ತಿರುವದರಿಂದ ಕೊರತೆಯೆನಿಸಿ, ಮಾನಸಿಕ ಅಶಾಂತಿ ಎದುರಿಸುತ್ತಿದ್ದಾನೆ. ಮಾನವೀಯ ಮೌಲ್ಯಗಳು ನಶಿಸುತ್ತಿರುವುದೆ ಅಶಾಂತಿಗೆ ಪ್ರಮುಖ ಕಾರಣವಾಗಿದೆ ಎಂದರು.

ಚಿಗುರು ಸಂಸ್ಥೆಯ ಮುಖ್ಯಸ್ಥ ಶರಣು ಎ.ಕಮಠಾಣ ಮಾತನಾಡಿ, ಅನೇಕ ಮಹನೀಯರು ಶಾಂತಿ, ಅಹಿಂಸೆಯ ಮೌಲ್ಯವನ್ನು ಬೋಧಿಸಿದ್ದಾರೆ. ಪ್ರಸ್ತುತ ಅವುಗಳ ಪಾಲನೆ ಅಗತ್ಯವಾಗಿದೆ. ಇರುವುದರಲ್ಲಿಯೇ ತೃಪ್ತಿ ಪಡೆಯುವುದನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ರಾಜಣ್ಣ ಪೂಜಾರಿ, ಕಾಮಣ್ಣ ಮದಗುಣಕಿ, ಸಿದ್ದಪ್ಪ ಪೂಜಾರಿ, ಕಾಶಿನಾಥ ಗೋಗಿ, ಶಿವಪುತ್ರ ಬೆಣ್ಣೂರ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *