ಬೆಂಗಳೂರು: ಜಾತಿ ಜನಗಣತಿ ನಡೆಯುವುದು ಖಚಿತವಾಗಿದ್ದು ಸರ್ಕಾರ ಅಧಿಕೃತ ಆದೇಶ ಪ್ರಕಟಿಸಿದೆ. ಸೆ.22 ರಿಂದ ಅ.7 ರವರೆಗೆ ಸಮೀಕ್ಷೆ ನಡೆಸಲಾಗುವುದು ಎಂದು ಆದೇಶಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಸಮೀಕ್ಷೆ ನಡೆಸಲಾಗುತ್ತಿದ್ದು ಸಮೀಕ್ಷೆಗೆ ಸಿದ್ಧರಿರುವಂತೆ ರಾಜ್ಯದ ಜನತೆಗೆ ತಿಳಿಸಲಾಗಿದೆ. ಆದರೆ ಈಗ ಎದ್ದಿರುವ ಗೊಂದಲ ಬಗೆಹರಿಸುವ ಬಗ್ಗೆ ಆದೇಶದಲ್ಲಿ ಯಾವುದೆ ಸ್ಪಷ್ಟನೆ ನೀಡಿಲ್ಲ.

ಈಗಾಗಲೇ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ರವರಿಗೆ ವಿಡಿಯೋ ಕಾನ್ಸರೆನ್ಸ್ ಮೂಲಕ ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ಹಾಗೂ ಸಮೀಕ್ಷಾದಾರರಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಸಾರ್ವಜನಿಕರನ್ನು ಸಮೀಕ್ಷಾ ಕಾರ್ಯದಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಅರಿವು ಮೂಡಿಸಬೇಕೆಂದು ತಿಳಿಸಲಾಗಿದೆ.
ಸರ್ಕಾರದ ಸಚಿವರಲ್ಲೇ ಜಾತಿ ಜನಗಣತಿಯ ಬಗ್ಗೆ ಗೊಂದಲ ಎದ್ದ ಕಾರಣ ಜಾತಿ ಜನಗಣತಿ ನಡೆಯುತ್ತದೆಯೋ ಇಲ್ವೋ ಎಂಬ ಗೊಂದಲ ಎದ್ದಿತ್ತು. ಆದರೆ ಈಗ ಸರ್ಕಾರವೇ ಅಧಿಕೃತ ಆದೇಶ ಪ್ರಕಟಿಸುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.