ಬೆಳಗಾವಿ: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆಯುತ್ತಿದೆ. ಪ್ರತಿ ಬಾರಿಯೂ ಉತ್ತರಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ವಿಶೇಷ ಭಿನ್ನಹ ಸಲ್ಲಿಸುವುದು ಮಾಮೂಲಿ. ಈ ಬಾರಿಯೂ ಸಹ ವಿದ್ಯಾರ್ಥಿಗಳು ತರಹೆವಾರಿ ಕೋರಿಕೆ ಸಲ್ಲಿಸಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಮೌಲ್ಯಮಾಪನ ಕೇಂದ್ರದಲ್ಲಿ ಪತ್ತೆಯಾಗಿದೆ ಎನ್ನಲಾದ ವಿದ್ಯಾರ್ಥಿಯೊಬ್ಬರ ಉತ್ತರಪತ್ರಿಕೆಯು ವಿಶೇಷ ಗಮನ ಸೆಳೆದಿದೆ. ಅದರಲ್ಲಿ ಆತ 500 ರೂ ನೋಟೊಂದು ಅಂಟಿಸಿ, “ಹೇಗಾದರೂ ಮಾಡಿ ನನ್ನನ್ನು ಪಾಸ್ ಮಾಡಿ. ಇಲ್ಲವಾದಲ್ಲಿ ನನ್ನ ಲವ್ ಫೇಲಾಗುತ್ತೆ. ನಾನು ಎಸ್ಎಸ್ಎಲ್ಸಿ ಪಾಸಾದರಷ್ಟೆ ನನ್ನ ಹುಡುಗಿ ಲವ್ ಮಾಡ್ತಿನಿ ಅಂದಾಳೆ” ಎಂದು ಬರೆದಿದ್ದಾನೆ.

ವಿದ್ಯಾರ್ಥಿ ಬರೆದಿದ್ದೆನು ?
ಸರ್/ಮೇಡಂ ಅವರೆ, ನಿಮ್ಮ ಕಾಲು ಬೀಳ್ತಿನಿ. ನನ್ನ LOVE ನಿಮ್ಮ ಕೈಯಲ್ಲಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮಾತ್ರ ನನ್ನ ಹುಡುಗಿ ಲವ್ ಮಾಡ್ತಿನಿ ಅಂದಾಳೆ. ಹೀಗಾಗಿ ಈ 500 ರೂ ಹಣದಲ್ಲಿ ಚಹಾ ಕುಡಿರಿ. ಪರೀಕ್ಷೆಯಲ್ಲಿ ನನ್ನ ಪಾಸ್ ಮಾಡಿ ಎಂದು ಕೇಳಿಕೊಂಡಿದ್ದಾನೆ. ಜೊತೆಗೆ 500 ರೂ ನೋಟನ್ನು ಉತ್ತರಪತ್ರಿಕೆಗೆ ಅಂಟಿಸಿದ್ದಾನೆ. ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.

ಮತ್ತೊಂದು ಉತ್ತರ ಪತ್ರಿಕೆ: ವಿದ್ಯಾರ್ಥಿನಿಯೊಬ್ಬಳು, ಸರ್/ಮೇಡಂ ಅವರೆ, ದಯಮಾಡಿ ಪರೀಕ್ಷೆಯಲ್ಲಿ ನನಗೆ ಪಾಸು ಮಾಡಿ. ನಾನು ಪಾಸ್ ಆಗದಿದ್ದರೆ ನಮ್ಮ ಮನೆಯಲ್ಲಿ ಮುಂದೆ ನನಗೆ ಶಾಲೆಗೆ ಕಳುಹಿಸುವುದಿಲ್ಲ. ಫೇಲ್ ಆದಲ್ಲಿ ಅಪ್ಪ, ಅಮ್ಮ ಹುಡುಗನನ್ನ ಹುಡುಕಿ ಮದುವೆ ಮಾಡಿಸ್ತಾರೆ, ನನಗೆ ಕಾಲೇಜಿಗೆ ಕಳುಹಿಸುವುದಿಲ್ಲ. ಹೀಗಾಗಿ ದಯಮಾಡಿ ಪಾಸ್ ಮಾಡಿ ಎಂದು ಕೋರಿದ್ದಾಳೆ.

ಡಿಡಿಪಿಐ ಸ್ಪಷ್ಟನೆ
ಜಿಲ್ಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ವಿಶೇಷ ಮನವಿ ಮಾಡಿದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿವೆ. ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಆರ್.ಎಸ್ ಸಿತಾರಾಮು ಅವರು, ಇಂತಹ ಯಾವುದೆ ವಿದ್ಯಮಾನಗಳು ನಮ್ಮಲ್ಲಿ ನಡೆದಿಲ್ಲ. ಇದು ಸತ್ಯಕ್ಕೆ ದೂರವಾಗಿದೆ. ಹಾಗೊಂದು ವೇಳೆ ವಿದ್ಯಾರ್ಥಿಗಳು ಈ ರೀತಿ ಕೋರಿಕೆ ಸಲ್ಲಿಸಿದರೆ, ಅದನ್ನು ಫೋಟೋ ತೆಗೆದು ಹಂಚಿಕೊಳ್ಳುವಂತಿಲ್ಲ. ಸಾಮಾಜಿಕ ಜಾಲತಾಣ ಮತ್ತು ಯುಟ್ಯೂಬ್ಗಳಲ್ಲಿ ಈ ಬಗ್ಗೆ ಪ್ರಕಟಿಸಲಾಗಿದೆ. ಇದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಶಿಕ್ಷಕ ವರ್ಗವನ್ನು ವಿಚಾರಿಸಿದ್ದೆನೆ. ಆ ರೀತಿ ಎಲ್ಲೂ ಕಂಡು ಬಂದಿಲ್ಲ. ಇದು ನಮ್ಮ ಜಿಲ್ಲೆಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.