ಕಲಬುರಗಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಲಬುರಗಿಯ ಮಹಾ ದಾಸೋಹಿ ಶರಣಬಸಪ್ಪ ಅಪ್ಪ (92) ಅವರಿಂದು ಲಿಂಗೈಕ್ಯರಾಗಿದ್ದಾರೆ.
ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿಯಾಗಿರುವ ಶರಣಬಸಪ್ಪ ಅಪ್ಪ ಅವರು ದಾಸೋಹ ಮಹಾ ಮನೆಯಲ್ಲಿ ಲಿಂಗೈಕ್ಯರಾಗಿದ್ದು, ಕುಟುಂಬಸ್ಥರು, ಅಪಾರ ಬಂಧು ಬಳಗ ಹಾಗೂ ಅನುಯಾಯಿಗಳನ್ನು ಅಗಲಿದ್ದಾರೆ.
ಅನಾರೋಗ್ಯದಿಂದ ಅಸ್ವಸ್ಥರಾಗಿದ್ದ ಶರಣಬಸಪ್ಪ ಅಪ್ಪ ಅವರನ್ನು ಖಾಸಗಿ ಆಸ್ಪತ್ರೆಯಿಂದ ಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಮಠದಲ್ಲೇ ಆರೈಕೆಗೆ ಕುಟುಂಬಸ್ಥರು ನಿರ್ಧರಿಸಿದ್ದರು. ಕೆಲ ದಿನಗಳಿಂದೀಚೆಗೆ ಮಠದಲ್ಲೇ ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಲಿಂಗೈಕ್ಯರಾಗಿದ್ದಾರೆ.
ಅಂತ್ಯ ಸಂಸ್ಕಾರಕ್ಕೆ ಬಿಗಿ ಬಂದೋಬಸ್ತ್
ಈ ಕುರಿತು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಮಾತನಾಡಿ, ರಾತ್ರಿ 9.20ರ ಸುಮಾರಿಗೆ ಶರಣಬಸಪ್ಪ ಅಪ್ಪ ಅವರು ಲಿಂಗೈಕರಾಗಿದ್ದಾರೆ. ದೇವಸ್ಥಾನದ ಮುಂಭಾಗದಲ್ಲಿಯೇ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ಹೇಳಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಆಗಮನದ ಹಿನ್ನೆಲೆ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನದ ಬಗ್ಗೆ ಕುಟುಂಬಸ್ಥರ ಜೊತೆಗೆ ಸಮಾಲೋಚನೆ ನಡೆಸಿ ಸಮಯ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.