ಸುದ್ದಿ ಸಂಗ್ರಹ ಕಲಬುರಗಿ
ಶ್ರೇಷ್ಟ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು ನೂರಾರು ವರ್ಷಗಳ ಹಿಂದೆಯೆ ನೀಡಿರುವ ತತ್ವ, ಸಂದೇಶ ಸಾರ್ವಕಾಲಿಕ ಪ್ರಸ್ತುತವಾಗಿವೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಟ್ಯುಟೋರಿಯಲ್ಸ್ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗ ಇವುಗಳ ವತಿಯಿಂದ ಸೋಮವಾರ ಜರುಗಿದ ‘ಸ್ವಾಮಿ ವಿವೇಕಾನಂದರ 163ನೇ ಜನ್ಮದಿನೋತ್ಸವ-ರಾಷ್ಟ್ರೀಯ ಯುವ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಸಕಾರಾತ್ಮಕ ಚಿಂತನೆ ಮೈಗೂಡಿಸಕೊಂಡು ಕಾರ್ಯ ನಿರ್ವಹಿಸಿದರೆ ಉನ್ನತ ಸಾಧನೆಯಾಗುತ್ತದೆ. ದೇಶದಿಂದ ಪಡೆದ ಜ್ಞಾನವನ್ನು, ದೇಶದ ಒಳಿತಿಗಾಗಿ ಬಳಸಬೇಕೆಂಬ ವಿವೇಕಾನಂದರ ತತ್ವವನ್ನು ಅಳವಡಿಸಿಕೊಳ್ಳಬೇಕು. ವಿವೇಕಾನಂದರು ಯುವಕರ ಬಗ್ಗೆ ಅಪಾರವಾದ ನಂಬಿಕೆ, ಕಾಳಜಿ ಹೊಂದಿದ್ದರು. ದೇಶದ ಭವ್ಯ ಪರಂಪರೆ ವಿಶ್ವಕ್ಕೆ ಪರಿಚಯಿಸಿ, ಭಾರತದ ಕೀರ್ತಿ ಪತಾಕೆ ಎಲ್ಲೆಡೆ ಪಸರಿಸುವಂತೆ ಮಾಡಿದ ಮಹಾನ ಚೇತನಶಕ್ತಿಯಾಗಿದ್ದಾರೆ. ಅವರ ಸಂದೇಶ ಯುವಶಕ್ತಿ ಅಳವಡಿಸಿಕೊಂಡು ದೇಶಕ್ಕೆ ಅಮೂಲ್ಯವಾದ ಕೊಡುಗೆ ನೀಡಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮುತ್ತಾ ಮಾತನಾಡಿ, ವಿವೇಕಾನಂದರು ಶ್ರೇಷ್ಠ ಮಾನವತಾವಾದಿ, ತತ್ವಜ್ಞಾನಿಯಾಗಿದ್ದರು. ಯುವ ಸಮೂಹಕ್ಕೆ ದಾರಿದೀಪವಾಗಿದ್ದಾರೆ. ದೇಶದ ಯುವಶಕ್ತಿಯ ಸಂಪೂರ್ಣ ಸದುಪಯೋಗವಾಗಬೇಕು. ವಿದ್ಯಾರ್ಥಿ ದಿಸೆಯಿಂದಲೆ ನಿಗದಿತ ಗುರಿ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ. ತಂದೆ-ತಾಯಿ, ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಆದರ್ಶ ವಡ್ಡನಕೇರಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿಲ್ಪ ಕಲಾವಿದ ಚಂದ್ರಶೇಖರ ವೈ.ಶಿಲ್ಪಿ, ನಾಗೇಶ ಕ್ಷೇತ್ರಿ ಮತ್ತು ವಿದ್ಯಾರ್ಥಿಗಳು ಇದ್ದರು.