ಬೆಂಗಳೂರ: ಕರ್ನಾಟಕದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಾಂತಿ ಅವರು ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂಬ ದೂರಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ನೇತೃತ್ವವನ್ನು ಪ್ರಣಬ್ ಮೊಹಂತಿ ವಹಿಸಿದ್ದಾರೆ.
ಈ ಸಂಬಂಧ ತನಿಖೆ ಚುರುಕುಗೊಂಡಿರುವಾಗಲೇ ಪ್ರಣಬ್ ಮೊಹಾಂತಿ ಅವರು ಸಿಬಿಐ ಮತ್ತು ಎನ್‌ಐಎ ನಂತಹ ಸಂಸ್ಥೆಗಳ ಮಹಾನಿರ್ದೇಶಕರಾಗುವ ಅರ್ಹತೆ ಪಡೆದಿದ್ದಾರೆ. ಒಂದು ವೇಳೆ ಅವರು ಕೇಂದ್ರಕ್ಕೆ ಹೋದರೆ, ಬೇರೆ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವರು ಹೇಳಿದ್ದೆನು ?
ಈ ಬಗ್ಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಒಂದು ವೇಳೆ ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಅಯ್ಕೆಯಾದರೆ ಎಸ್‌ಐಟಿಗೆ ಬೇರೆ ಅಧಿಕಾರಿಯನ್ನು ನೇಮಕ ಮಾಡುವ ಬಗ್ಗೆ ಚರ್ಚಿಸುತ್ತೆವೆ. ಕೇಂದ್ರ ಸೇವೆಗೆ ವರ್ಗಾವಣೆಗೊಂಡರು ಎಸ್‌ಐಟಿ ತನಿಖೆಯನ್ನು ಮುಂದುವರಿಸಲು ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸುತ್ತೆವೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸೇವೆಗೆ ಆಯ್ಕೆ
ಕೇಂದ್ರ ಸರ್ಕಾರದ ನೇಮಕಾತಿಗಳ ಸಂಪುಟ ಸಮಿತಿಯು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ದೇಶಾದ್ಯಂತ 35 ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದಿಂದ ಸ್ಥಾನ ಪಡೆದ ಏಕೈಕ ಅಧಿಕಾರಿ ಪ್ರಣಬ್ ಮೊಹಂತಿ ಆಗಿದ್ದಾರೆ. ಈ ಹಿಂದೆಯೂ ಅವರು ಸ್ವಲ್ಪ ಸಮಯ ಕೇಂದ್ರ ಸೇವೆಯಲ್ಲಿದ್ದರು. ಈಗ ಮತ್ತೆ ಕೇಂದ್ರ ಸೇವೆಗೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯಂತಹ ಕೇಂದ್ರ ತನಿಖಾ ಸಂಸ್ಥೆಗಳ ಮಹಾನಿರ್ದೇಶಕ ಹುದ್ದೆಗಳಿಗೆ ಅವರು ಅರ್ಹರಾಗಿದ್ದಾರೆ.
ಧರ್ಮಸ್ಥಳದಲ್ಲಿ ಪ್ರಣಬ್ ಮೊಹಂತಿ
ಧರ್ಮಸ್ಥಳ ಪ್ರಕರಣದ ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣಬ್ ಮೊಹಂತಿ ಅವರು ಇಂದು (ಜುಲೈ 30) ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು, ವ್ಯಕ್ತಿಯೊರ್ವ ಹೂತಿಟ್ಟಿರುವ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಧರ್ಮಸ್ಥಳ ಪ್ರಕರಣದ ಶವಗಳ ಶೋಧ ಕಾರ್ಯ ಕಳೆದ ಎರಡು ದಿನಗಳಿಂದ ನಡೆಯುತ್ತಿದೆ ಕೇಂದ್ರ ಸರ್ಕಾರವು 35 ಐಪಿಎಸ್ ಅಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಕೇಂದ್ರ ಸೇವೆಗೆ ಅರ್ಹತೆ ಪಡೆದವರ ಪಟ್ಟಿಯಲ್ಲಿ ಮೊಹಾಂತಿ ಒಬ್ಬರಾಗಿದ್ದಾರೆ. ಸದ್ಯ ಅವರು ಧರ್ಮಸ್ಥಳದ ನಿಗೂಢ ಸಾವಿನ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಕೇಂದ್ರ ಸೇವೆಗೆ ಹೋಗುತ್ತಾರಾ ಇಲ್ಲವಾ ಎಂಬುದು ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ.