ಭಾರತೀಯರು ಕ್ಯಾಡ್ಬರಿ ಜೆಮ್ಸ್‌ನಂತೆ Dolo-650 ಮಾತ್ರೆ ತೆಗೆದುಕೊಳ್ಳುತ್ತಾರೆ: ವೈದ್ಯರೊಬ್ಬರ ಪೋಸ್ಟ್ ವೈರಲ್

ರಾಜ್ಯ

ಭಾರತದಲ್ಲಿ ಪ್ಯಾರಸಿಟಮಾಲ್ ವ್ಯಾಪಕವಾಗಿ ಲಭ್ಯವಿದೆ. ಅನೇಕ ಜನರು ಜ್ವರ ಬಂದರೆ ಸಾಕು ಆ ಮಾತ್ರೆ ತೆಗೆದುಕೊಳ್ಳುತ್ತಾರೆ. ಈ ಪೈಕಿ ಲಭ್ಯವಿರುವ ವಿವಿಧ ಬ್ರ್ಯಾಂಡ್‌ಗಳಲ್ಲಿ ‘ಡೋಲೋ 650’ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ.

ಈ ಪ್ರವೃತ್ತಿಯನ್ನು ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಆರೋಗ್ಯ ಶಿಕ್ಷಕ ಪಳನಿಯಪ್ಪನ್ ಮಾಣಿಕ್ಕಮ್ ಎತ್ತಿ ತೋರಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಭಾರತೀಯರು ಡೋಲೋ 650 ಅನ್ನು ಕ್ಯಾಡ್ಬರಿ ಜೆಮ್ಸ್‌ನಂತೆ ತೆಗೆದುಕೊಳ್ಳುತ್ತಾರೆ’ ಎಂದಿದ್ದಾರೆ.

ಭಾರತದಲ್ಲಿ ವೈದ್ಯರು ಸಾಮಾನ್ಯವಾಗಿ ಜ್ವರ, ತಲೆನೋವು, ದೇಹದ ನೋವು ಮತ್ತು ಸೌಮ್ಯ ನೋವುಗಳಿಗೆ ಡೋಲೋ-650 ಶಿಫಾರಸು ಮಾಡುತ್ತಾರೆ. ಏಕೆಂದರೆ ಅದು ಪರಿಣಾಮಕಾರಿ ಅಷ್ಟೆ ಅಲ್ಲದೆ ವೈದ್ಯರ ಸಲಹೆ ಮೇರೆಗೆ ತೆಗೆದುಕೊಂಡಾಗ ಯಾವುದೆ ಸೈಡ್ ಎಫೆಕ್ಟ್ ಆಗುವುದಿಲ್ಲ. ಆದರೆ ಯಾವುದೆ ಔಷಧಿಯಾದರೂ ಅತಿಯಾದ ಬಳಕೆಯಿಂದ ಹಾನಿ ಉಂಟಾಗಬಹುದು. ವಿಶೇಷವಾಗಿ ಯಕೃತ್ತಿಗೆ ಹಾನಿಯಾಗುವ ಸಾಧ್ಯತೆಯಿದೆ. ಹೀಗಾಗಿ ವೈದ್ಯಕೀಯ ಸಲಹೆ ಮತ್ತು ಶಿಫಾರಸು ಮಾಡಿದ ಡೋಸೇಜ್ ಅನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ಕೋವಿಡ್ ಲಸಿಕೆ ಪಡೆದಾಗ ಪ್ಯಾರಸಿಟಮಾಲ್ ತೆಗೆದುಕೊಳ್ಳುವಂತೆ ಸೂಚಿಸಿದ ನಂತರ ಇದು ಹೆಚ್ಚು ಜನಪ್ರಿಯತೆ ಪಡೆಯಿತು.

ಡೋಲೋ-650 ಮಾತ್ರೆಯು ಪ್ಯಾರಸಿಟಮಾಲ್ ಅನ್ನು ಹೊಂದಿದ್ದು, ಇದು ನೋವು, ಉರಿಯೂತ ಮತ್ತು ಜ್ವರದ ಸಂವೇದನೆಗಳನ್ನು ಉಂಟುಮಾಡುವ ಪ್ರೊಸ್ಟಗ್ಲಾಂಡಿನ್ ಬಿಡುಗಡೆಯನ್ನು ತಡೆಯುತ್ತದೆ. ಅಲ್ಲದೆ ಜ್ವರ ಇರುವ ಸಂದರ್ಭಗಳಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಫೋರ್ಬ್ಸ್ ಪ್ರಕಾರ, 2020ರಲ್ಲಿ ಕೋವಿಡ್-19 ಏಕಾಏಕಿ ಕಾಣಿಸಿಕೊಂಡ ನಂತರ ಮೈಕ್ರೋ ಲ್ಯಾಬ್ಸ್ 350 ಕೋಟಿಗೂ ಹೆಚ್ಚು ಡೋಲೋ-650 ಮಾತ್ರೆಗಳನ್ನು ಮಾರಾಟ ಮಾಡಿದೆ. ಈ ಮೂಲಕ ವರ್ಷದಲ್ಲಿ 400 ಕೋಟಿ ರೂ. ಆದಾಯವನ್ನು ಗಳಿಸಿದೆ. ಸಾಂಕ್ರಾಮಿಕ ರೋಗಕ್ಕೂ ಮುನ್ನ ಮೈಕ್ರೋ ಲ್ಯಾಬ್ಸ್ ಸಂಸ್ಥೆಯು ವಾರ್ಷಿಕವಾಗಿ ಸುಮಾರು 7.5 ಕೋಟಿ ಡೋಲೋ-650 ಸ್ಟ್ರಿಪ್ಸ್‌ಗಳನ್ನು ಮಾರಾಟ ಮಾಡುತ್ತಿತ್ತು. ಆದರೆ, ಅದಾದ ಒಂದು ವರ್ಷದ ನಂತರ ಅದು 9.4 ಕೋಟಿ ಸ್ಟ್ರಿಪ್ಸ್‌ಗಳಿಗೆ ಏರಿಕೆಯಾಗಿದೆ. 2021ರ ಅಂತ್ಯದ ವೇಳೆಗೆ 14.5 ಕೋಟಿ ಸ್ಟ್ರಿಪ್ಸ್‌ಗಳನ್ನು ಮುಟ್ಟಿದೆ. 2019ರ ಅಂಕಿ ಅಂಶಗಳಿಗೆ ಹೋಲಿಸಿದರೆ ದ್ವಿಗುಣಗೊಂಡಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಕ್ಯೂವಿಐಎ ತಿಳಿಸಿದೆ.

Leave a Reply

Your email address will not be published. Required fields are marked *