ಆಳಂದ ಸಾಸಿರ ನಾಡಿನ ಕೀರ್ತಿ ಹೆಚ್ಚಿಸಿದ ಲಾಡ ಚಿಂಚೋಳಿ ಸ್ಮಾರಕಗಳು: ಮುಡುಬಿ ಗುಂಡೇರಾವ

ಜಿಲ್ಲೆ

ಕಲಬುರಗಿ: ಆಲಂದಿ ಸಾಸಿರ ನಾಡಿನ ಕೀರ್ತಿ ಹೆಚ್ಚಿಸಿದ ಲಾಡ ಚಿಂಚೋಳಿ ಸ್ಮಾರಕಗಳ ಕೊಡುಗೆ ಅಪಾರವಾಗಿದೆ ಎಂದು ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.

ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದಲ್ಲಿ ಪ್ರಾಚೀನ ಸಿದ್ದೇಶ್ವರ ದೇವಾಲಯದಲ್ಲಿ ಬಸವೇಶ್ವರ ಸೇವಾ ಬಳಗ ಆಯೋಜಿಸಿದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ- 25ರಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಈ ಗ್ರಾಮವು ಆಲಂದಿ ಸಾಸಿರ ಅಂದರೆ ಸಾವಿರ ಹಳ್ಳಿಗಳಿಗೆ ರಾಜಧಾನಿಯಾಗಿದ್ದ ಆಳಂದ ಪಟ್ಟಣದ ಆಡಳಿತಕ್ಕೆ ಸೇರಿತ್ತು, ಕಲ್ಯಾಣ ಚಾಲುಕ್ಯರ ರಾಣಿ ಚಂದಲಾದೇವಿಯು ಈ ಗ್ರಾಮವನ್ನು ಆಳಿದ್ದಾರೆ, ಇದೊಂದು ಶಿಕ್ಷಣ ನೀಡುವ ಕೇಂದ್ರ ಅಗ್ರಹಾರವಾಗಿ ಹಿಂದಿನ ಕಾಲದಲ್ಲಿ ವೈಭವವನ್ನು ಮೆರೆದಿದಿದೆ. ಲಾಡಚಿಂಚೋಳಿ ಗ್ರಾಮದಲ್ಲಿರುವ ಐತಿಹಾಸಿಕ ಸಿದ್ದೇಶ್ವರ ದೇವಾಲಯವು 10 ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಿದ ಅದ್ಭುತ ಕಲಾತ್ಮಕ ದೇವಾಲಯವಾಗಿದೆ. ಇಲ್ಲಿಯ ಮದನಿಕೇಯರ ಶಿಲ್ಪಗಳು ಮನೋಜ್ಞವಾಗಿವೆ, ದೇವಾನು ದೇವತೆಗಳ ಶಿಲ್ಪಗಳು ಭಕ್ತಿಯ ಪ್ರತೀಕವಾಗಿವೆ. ಎತ್ತರದ ಜಗುಲಿಯ ಮೇಲೆ ನಿರ್ಮಾಣಗೊಂಡ ಈ ದೇಗುಲವು ಪ್ರಾಚೀನ ಕಾಲದ ಕಲೆ, ಸಾಹಿತ್ಯ, ಸಂಗೀತ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಆದ್ಯಾತ್ಮ, ರಾಜಕೀಯ, ಆಡಳಿತ ಮುಂತಾದ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲುತ್ತವೆ, ಇಲ್ಲಿಯ ದ್ವಾರ ಪಟ್ಟಿಕೆಗಳು, ದ್ವಾರಪಾಲಕರ, ಅಷ್ಟ ದಿಕ್ಪಾಲಕರು, ನಟರಾಜ, ಗಣೇಶ ಮುಂತಾದ ಶಿಲ್ಪಗಳು ನೋಡುಗರ ಗಮನ ಸೆಳೆಯುತ್ತವೆ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕ ಡಾ. ವಾಸುದೇವ ಹೆಚ್ ಸೇಡಂ ಮಾತನಾಡಿ ಪ್ರಾಚೀನ ಸ್ಮಾರಕಗಳ ರಕ್ಷಣೆ ಪ್ರತಿಯೊಬ್ಬರಿಂದ ಆಗಬೇಕು, ದೇವಾಲಗಳು ನಮ್ಮ ಸಂಸ್ಕೃತಿಯ ಜೀವಾಳವಾಗಿವೆ, ಕನ್ನಡಿಗರ ಸಾಧನೆಗಳು ತಿಳಿಸುವ ಸ್ಮಾರಕಗಳನ್ನು ಸಂರಕ್ಷಿಸುವ ಕೆಲಸವಾಗಬೇಕು ಎಂದರು.

ಬಳಗದ ಅಧ್ಯಕ್ಷ ಪ್ರೊ.ಹೆಚ್.ಬಿ ಪಾಟೀಲ ಮಾತನಾಡಿ, ಕಳೆದ ಒಂದು ವರ್ಷದಿಂದ ನಮ್ಮ ಬಳಗದ ವತಿಯಿಂದ ಜಿಲ್ಲೆಯ ಸ್ಮಾರಕಗಳ ರಕ್ಷಣೆಗಾಗಿ ಅಭಿಯಾನ ಹಮ್ಮಿಕೊಳ್ಳುತ್ತಾ ಬರಲಾಗಿದೆ. ನಮ್ಮೂರು ನಮಗೆ ಹೆಮ್ಮೆ ಎಂಬ ಅಭಿಯಾನ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದ ಸಿದ್ದೇಶ್ವರ ದೇವಾಲಯವು ಕರುನಾಡಿನ ಇತಿಹಾಸ ಸಾರುತ್ತಿದೆ, ಗೊಡೆಯ ಸುತ್ತಲೂ ಮದನಿಕೆಯರ, ದೇವಾನು ದೇವತೆಗಳ ಶಿಲ್ಪಗಳು ಪ್ರಾಚೀನ ಕಾಲದ ಕಲೆ, ಸಂಗೀತ, ಧರ್ಮ, ಆಧ್ಯಾತ್ಮ, ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತವೆ. ಈ ಗ್ರಾಮವು ಆಲಂದ ಸಾಸಿರ ನಾಡಿಗೆ ಮುಕುಟವಾಗಿದೆ. ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ, ಐತಿಹಾಸಿಕ ಪ್ರಜ್ಞೆ ಜಾಗೃತಗೊಳ್ಳಬೇಕಾಗಿದೆ.

ಮುಡುಬಿ ಗುಂಡೇರಾವ
ಸಂಶೋಧಕ ಸಾಹಿತಿಗಳು

ಈ ಸಂದರ್ಭದಲ್ಲಿ ಸಾಮಾಜ ಸೇವಕ ಶಿವಯೋಗಪ್ಪ ಬಿರಾದಾರ, ನಾಗೇಂದ್ರಪ್ಪ, ರಾಜಕುಮಾರ, ಭಗವಂತರಾಯ, ಶಾಂತಮಲ್ಲಪ್ಪ, ಶಂಕರರಾವ, ಮಲ್ಲಿನಾಥ ಧನಕ, ಸಿ.ಬಿ ಪಾಟೀಲ, ರಮೇಶ, ಶಿವಯ್ಯ, ಫತ್ರುಸಾಬ, ಈರಣ್ಣ, ಶ್ರೀಮಂತ, ಶಾಂತು, ಮಹಾಂತಪ್ಪ, ಆಕಾಶ, ಜ್ಙಾನೇಶ್ವರ ಮಹಾಂತಯ್ಯ, ಸಂತೋಷಕುಮಾರ, ಷಣ್ಮುಖಪ್ಪ, ಶಿವಲೀಲಾ ಸೇರಿದಂತೆ ಮುಂತಾದವರು ಇದ್ದರು.



Leave a Reply

Your email address will not be published. Required fields are marked *