ಕಲಬುರಗಿ: ಶಿಕ್ಷಣವು ವ್ಯಕ್ತಿಗೆ ಜ್ಞಾನ, ಬುದ್ದಿ, ಸಂಸ್ಕಾರ, ಮಾನವೀಯತೆ, ಕೌಶಲಗಳನ್ನು ನೀಡಿ ರಾಷ್ಟ್ರದ ಸದೃಢ ಮಾನವ ಸಂಪನ್ಮೂಲ ನಿರ್ಮಾಣ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆಯ ಪ್ರಮುಖ ಸಾಧನವಾಗಿದೆ. ಆದರೆ ಶಿಕ್ಷಣವು ಕೇವಲ ಪರಿಮಾಣಾತ್ಮಕವಾಗಿದ್ದರೆ ಪ್ರಯೋಜನೆಯಿಲ್ಲ. ಅದು ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದ ಶಿಕ್ಷಣ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶಿಕ್ಷಣ ಪ್ರೇಮಿ ಡಾ.ಸುನೀಲಕುಮಾರ ಎಚ್ ವಂಟಿ ಅಭಿಪ್ರಾಯಪಟ್ಟರು.
ನಗರದ ಆಸಿಫ್ ಗಂಜ್‌ನ ಕಸ್ತೂರಬಾ ಬಾಲಿಕಾ ವಸತಿ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಮಾನವೀಯ ಮೌಲ್ಯಗಳು, ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ನಸಿಮುನ್ನಿಸಾ ಬೇಗಂ ಮಾತನಾಡಿ, ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಎಲ್ಲಾ ಸಿಬ್ಬಂದಿ ಶೃದ್ಧೆಯಿಂದ ಸೇವೆ ಸಲ್ಲಿಸುತ್ತಾರೆ. ಶಾಲೆಯು ವಸತಿ ಸಹಿತವಾಗಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.
ಪ್ರಾರಂಭೋತ್ಸವದ ನಿಮಿತ್ಯ ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ವತಿಯಿಂದ ಶಾಲೆಗೆ ಸಸಿಗಳನ್ನು ನೀಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಪುಷ್ಪವೃಷ್ಠಿ ಮಾಡಿ, ಆತ್ಮೀಯವಾಗಿ ಸ್ವಾಗತಿಸಲಾಯಿತು. ಮಕ್ಕಳು ತುಂಬಾ ಸಂತೋಷದಿಂದ ಶಾಲೆಗೆ ಆಗಮಿಸಿದರು. ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪ್ಪಾ ಎಸ್.ಬಿರಾದಾರ, ಮುಖಂಡ ಮಲ್ಲಿಕಾರ್ಜುನ ಸಂಗಾಣಿ, ಉಮೇಶ ಪಾಳಾ, ಶಾಲೆಯ ಎಸ್’ಡಿಎಂಸಿ ಅಧ್ಯಕ್ಷೆ ಶ್ರೀದೇವಿ ದಾನಕಿ, ಇನ್ನರ್ ವೀಲ್ ಸಂಸ್ಥೆಯ ಸದಸ್ಯೆ ರತ್ನಕಲಾ ತಡಕಲ್, ಸುವರ್ಣಾ ಮಠಪತಿ, ಶ್ರೀದೇವಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು, ಪಾಲಕ-ಪೋಷಕರು, ವಿದ್ಯಾರ್ಥಿಗಳು ಇದ್ದರು.