ನಲಗೊಂಡ: 15 ತಿಂಗಳ ಗಂಡು ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ತಾಯಿಯೊಬ್ಬಳು ಪ್ರೇಮಿಯ ಜೊತೆಗೆ ಓಡಿ ಹೋದ ಅಮಾನವೀಯ ಘಟನೆ ತೆಳಂಗಾಣದ ನಲಗೊಂಡದಲ್ಲಿ ನಡೆದಿದೆ.
ಘಟನೆಯ ಸಂಪೂರ್ಣ ದೃಶ್ಯ ಬಸ್ ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ನೋಡಿದ ಅನೇಕರು ತಾನೆ ಹೆತ್ತ ಪುಟ್ಟ ಮಗುವನ್ನು ನಡುಬೀದಿಯಲ್ಲಿ ಬಿಟ್ಟು ಹೋಗಿ, ಅಮ್ಮನೆಂಬ ಮಮತೆಯ ಸ್ಥಾನಕ್ಕೆ ಕಳಂಕ ತಂದಿರುವ ಮಹಿಳೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಸ್ ನಿಲ್ದಾಣದಲ್ಲಿ ಮಹಿಳೆ ಈ ಕೃತ್ಯ ಎಸಗಿದ್ದಾಳೆ. ಮಗು ಅಳುವುದನ್ನು ಲೆಕ್ಕಿಸದೆ ತಾಯಿ ಬಸ್ ನಿಲ್ದಾಣ ಬಿಟ್ಟು ಓಡಿ ಹೋಗಿದ್ದಾಳೆ. ಇತ್ತ ಮಗುವಿನ ಅಳುವು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವನ್ನು ನಡುರಸ್ತೆಯಲ್ಲಿ ಬಿಟ್ಟು ಹೋದ ತಾಯಿಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದ ಯುವಕನ ಮೇಲೆ ಪ್ರೀತಿಯಾಗಿದ್ದು, ಅತನಿಗಾಗಿ ಮುದ್ದಿನ ಮಗ ಮತ್ತು ಗಂಡನನ್ನು ಬಿಟ್ಟು ಹೋಗುವುದಕ್ಕೆ ರೆಡಿಯಾಗಿದ್ದಾಳೆ.
ಪ್ರೇಮಿಗಾಗಿ 15 ತಿಂಗಳ ಮಗುವನ್ನು ತೊರೆದ ಮಹಿಳೆ
ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಇನಿಯನ ಜೊತೆ ಬೈಕ್‌ನಲ್ಲಿ ಪರಾರಿಯಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಟೌನ್ ಎಸ್‌ಐ ವಿ. ಸೈದುಲು ಮಾತನಾಡಿದ್ದು, ಹೈದರಾಬಾದ್ ಮೂಲದ ನವೀನಾ ಎಂಬ ವಿವಾಹಿತ ಮಹಿಳೆ ತನ್ನ 15 ತಿಂಗಳ ಮಗು ಧನುಷ್‌ನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ನಲಗೊಂಡ ಓಲ್ಡ್ ಸಿಟಿಯ ಯುವಕನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾಳೆ. ಪ್ರಾಥಮಿಕ ತನಿಖೆಯಲ್ಲಿ ಇವರಿಬ್ಬರಿಗೆ ಸಂಬಂಧವಿದ್ದು, ಹೀಗಾಗಿ ಆಕೆ ಗಂಡ ಮಗುವನ್ನು ಬಿಟ್ಟು ಹೋಗುವುದಕ್ಕೆ ನಿರ್ಧರಿಸಿದ್ದಳು ಎಂದು ಹೇಳಿದ್ದಾರೆ.
ಬೈಕ್‌ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬಸ್ ನಿಲ್ದಾಣದ ಸಿಸಿ ಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿದ್ದು, ನವೀನಾ ತನ್ನ ಮಗನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗುತ್ತಿರುವುದು ಕಾಣುತ್ತಿದೆ. ಜೊತೆಗೆ ಆಕೆ ಬೈಕ್ ಹಿಂದೆ ಕುಳಿತು ಹೋಗುತ್ತಿರುವ ದೃಶ್ಯವೂ ಸೆರೆಯಾಗಿದೆ. ಅಮ್ಮ ಹೋಗಿದ್ದು ಮಗು ನೋಡಿ ಮಮ್ಮಿ ಎಂದು ಕರೆಯುವುದು ಕೂಡ ರೆಕಾರ್ಡ್ ಆಗಿದೆ ಎಂದುವ ವರದಿಯಾಗಿದೆ.
ಇನ್ಸ್ಟಾಗ್ರಾಂ ಲವರ್‌ಗಾಗಿ ಗಂಡ ಮತ್ತು ಮಗನನ್ನು ತೊರೆದ ತಾಯಿ
ಸಿಸಿ ಟಿವಿ ದೃಶ್ಯಾವಳಿ ಗಮನಿಸಿ ಆ ಬೈಕ್‌ನ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚಿದಾಗ ಮಹಿಳೆಯ ಗೆಳೆಯ ತನ್ನ ಸ್ನೇಹಿತನಾಗಿದ್ದು, ಆತ ತನ್ನ ಬಳಿ ಬೈಕ್ ಕೇಳಿದ್ದ ಎಂದು ಅವರು ಪೊಲೀಸರಿಗೆ ಹೇಳಿದ್ದಾರೆ. ಹಾಗಾಗಿ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಇವರಿಬ್ಬರಿಗೂ ಇನ್ಸ್ಟಾಗ್ರಾಂನಲ್ಲಿ ಪ್ರೀತಿಯಾಗಿದ್ದು, ಆತನ ಗೆಳೆತನಕ್ಕಾಗಿ ಮಹಿಳೆ ಮಗುವನ್ನು ತೊರೆದಿರುವ ವಿಚಾರ ಗೊತ್ತಾಗಿದೆ.
ಕಾರ್ಯಾಚರಣೆಗೆ ಇಳಿದ ಪೊಲೀಸರು ಮಹಿಳೆ ಹಾಗೂ ಆಕೆಯ ಲವ್ವರ್ ಮತ್ತು ಪತಿಯನ್ನು ಪೊಲೀಸ್ ಠಾಣೆಗೆ ಕರೆಸಿ ಕೌನ್ಸೆಲಿಂಗ್ ನಡೆಸಿದ್ದಾರೆ. ನಂತರ ಮಗುವನ್ನು ತಂದೆಯ ಸುಪರ್ದಿಗೆ ನೀಡಲಾಗಿದೆ. ಒಟ್ಟಿನಲ್ಲಿ ಮಕ್ಕಳಿಲ್ಲದ ದಂಪತಿ ಒಂದು ಮಗು ಪಡೆಯುವುದಕ್ಕಾಗಿ ಆಸ್ಪತ್ರೆಗಳಿಗೆ ಲಕ್ಷಾಂತರ ರೂ ವೆಚ್ಚ ಮಾಡುವುದರ ಜೊತೆಗೆ ದೇಗುಲ ತೀರ್ಥಕ್ಷೇತ್ರ ಅಂತ ಸುತ್ತಾಡ್ತಿದರೆ, ಅವಳೆ ಹೆತ್ತಿರುವ ಮಗುವನ್ನು ಮಹಿಳೆ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರುವುದು ಆಘಾತ ಮೂಡಿಸಿದೆ.