ಅಮರಾವತಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ತೆಲುಗು ದೇಶಂ ಪಕ್ಷದ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಅವರು, 3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದಾರೆ. ಇದು ಆಂಧ್ರಪ್ರದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಪ್ರಕಾಶಂ ಜಿಲ್ಲೆಯ ಮಾರ್ಕಾಪುರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ಮಹಿಳೆಯೊಬ್ಬರು 3ನೇ ಮಗುವಿಗೆ ಜನ್ಮ ನೀಡಿದರೆ ವಿಶೇಷ ಉಡುಗೊರೆ ನೀಡಲಾಗುವುದು. ಹೆಣ್ಣು ಮಗುವಿಗೆ ಜನ್ಮ ನೀಡಿದರೆ ನನ್ನ ಸ್ವಂತ ವೇತನದಲ್ಲಿ 50 ಸಾವಿರ ರೂ, ಗಂಡು ಮಗುವಿಗೆ ಜನ್ಮ ನೀಡಿದರೆ 1 ಹಸು ಉಡಗೊರೆಯಾಗಿ ಕೊಡಲಾಗುವದು ಎಂದು ಘೋಷಣೆ ಮಾಡಿದ್ದಾರೆ. ಸಂಸದರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಜನಸಂಖ್ಯೆ ಬೆಳವಣಿಗೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕರೆಗಳ ಮೇರೆಗೆ ಈ ವಿಶೇಷ ಉಡುಗೊರೆಗಳನ್ನು ಘೋಷಣೆ ಮಾಡಲಾಗಿದೆ. ಮಹಿಳೆಯರು ಹೆಚ್ಚು ಮಕ್ಕಳನ್ನು ಹೊಂದಬೇಕೆಂದು ಹೇಳುತ್ತಿದ್ದೆವೆ. ಹೀಗಾಗಿ 3ನೇ ಮಗು ಜನಿಸಿದರೆ ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದೆವೆ ಎಂದು ಸಂಸದ ಅಪ್ಪಲನಾಯ್ಡು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಚಂದ್ರಬಾಬು ನಾಯ್ಡು ಅವರು, ಮಹಿಳೆಯರು ಸಂಖ್ಯೆಯನ್ನು ಲೆಕ್ಕಿಸದೆ ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳಿ. ಅದಕ್ಕಾಗಿ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ನೀಡಲಾಗುವದು ಎಂದು ಘೋಷಣೆ ಮಾಡಿದ್ದರು. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು ಸಹ 2026ರ ಒಳಗೆ ಮಹಿಳೆಯರು ಹೆಚ್ಚೆಚ್ಚು ಮಕ್ಕಳು ಮಾಡಿಕೊಳ್ಳುವಂತೆ ಕರೆ ನೀಡಿದ್ದರು.