ರಸ್ತೆಯಲ್ಲಿ ಬಿಟ್ಟು ಕಾರಿನಲ್ಲಿ ತೆರಳಿದ ಮಾಲೀಕನ ಹಿಂಬಾಲಿಸಿದ ನಾಯಿ, ಮನಕಲುಕುವ ವಿಡಿಯೋ

ರಾಷ್ಟೀಯ

ಫರೀದಾಬಾದ್: ನಾಯಿ ಮರಿಯನ್ನು ತಂದು ಮುದ್ದಾಗಿ ಸಾಕುತ್ತಾರೆ. ಆದರೆ ನಾಯಿಗೆ ವಯಸ್ಸಾದರೆ, ಆರೋಗ್ಯ ಹದಗೆಟ್ಟಿದ್ದರೆ, ನಾಯಿ ಮಾತು ಕೇಳದಿದ್ದರೆ ಕೆಲವರು ಸಾಕಿದ ನಾಯಿಯನ್ನು ರಸ್ತೆಯಲ್ಲಿ ಬಿಡುತ್ತಾರೆ. ಹಾಗೆಯೇ ಇಲ್ಲೊಬ್ಬ ಮಾಲೀಕ ಸಾಕಿದ ನಾಯಿಯನ್ನು ಮನೆಯಿಂದ ಹಲವು ಕಿಲೋಮೀಟರ್ ದೂರದವರೆಗೆ ಕಾರಿನಲ್ಲಿ ಕರೆದುಕೊಂಡು ಬಂದು ಮಾರುಕಟ್ಟೆ ಬಳಿ ಕಾರಿನಿಂದ ಕೆಳಗಿಳಿಸಿ, ಅತಿ ವೇಗವಾಗಿ ಕಾರು ಚಲಾಯಿಸಿಕೊಂಡು ತೆರಳಿದ್ದಾನೆ.

ಮಾಲೀಕನ ಕಾರು ತೆರಳುತ್ತಿರುವುು ಗಮನಿಸಿದ ನಾಯಿ ಕಾರನ್ನು ಹಿಂಬಾಲಿಸಿದೆ. ಹಲವು ಕಿಲೋಮೀಟರ್ ವರೆಗೆ ನಾಯಿ ಕಾರು ಹಿಂಬಾಲಿಸಿ ಬಸವಳಿದ ಘಟನೆ ನಡೆದಿದೆ. ಆದರೆ ಮಾಲೀಕ ಮಾತ್ರ ನಾಯಿ ಕಡೆ ತಿರುಗಿಯೂ ನೋಡದೆ ತೆರಳಿದ ಮನಕಲುಕುವ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

ವಿದಿತ ಶರ್ಮಾ ಎಂಬುವವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೊಂದು ಕ್ರೂರ ಮನಸ್ಸು ಯಾಕೆ ? ಸಾಕಿದ ನಾಯಿಯನ್ನು ಬೀದಿಯಲ್ಲಿ ಬಿಟ್ಟುಹೋಗುತ್ತಿರುವ ಮನಸ್ಥಿತಿ ಅತ್ಯಂತ ಕ್ರೂರ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಫರೀದಾಬಾದ್‌ನ ಕ್ಯೂಆರ್‌ಜಿ ಆಸ್ಪತ್ರೆ ಬಳಿ ಟಾಚಾ ಪಂಚ್ ಕಾರಿನ ಮೂಲಕ ಆಗಮಿಸಿದ ಮಾಲೀಕನೊಬ್ಬ ತನ್ನ ನಾಯಿಯನ್ನು ಕಾರಿನಿಂದ ಕೆಳಗಿಳಿಸಿದ್ದಾನೆ. ಬಳಿಕ ತಾನು ಕಾರು ಹತ್ತಿ ಅತಿ ವೇಗವಾಗಿ ತೆರಳಿದ್ದಾನೆ. ಮಾಲೀಕ ತನ್ನನ್ನು ಬೀದಿಗೆ ಬಿಟ್ಟು ಹೋಗುತ್ತಿದ್ದಾನೆ ಎಂಬ ಅರಿವಿಲ್ಲದ ನಾಯಿ ಅತ್ತ ಇತ್ತ ನೋಡುತ್ತಿದ್ದಂತೆ ಮಾಲೀಕ ಕಾರು ಹತ್ತಿ ವೇಗವಾಗಿ ತೆರಳಿದ್ದಾನೆ. ಈ ಮಾಹಿತಿ ವಿದಿತ ಶರ್ಮಾ ನೀಡಿದ್ದಾರೆ.

ಮಾಲೀಕನ ಕಾರು ವೇಗವಾಗಿ ಚಲಾಯಿಸಿದರು ನಾಯಿ ಕಾರು ಹಿಂಬಾಲಿಸಿದೆ. ಕಾರಿನ ಹಿಂದೆ ಬೊಗಳುತ್ತಾ ವೇಗವಾಗಿ ಓಡಿದೆ. ಹಲವರು ನಾಯಿ ಹಿಂಬಾಲಿಸುತ್ತಿರುವುದಾಗಿ ಕಾರಿನ ಮಾಲೀಕನಿಗೆ ಕೂಗಿ ಹೇಳಿದ್ದಾರೆ. ಆದರೆ ಮಾಲೀಕ ಮಾತ್ರ ಯಾವ ಮಾತು ಕೇಳಿಸಿಕೊಳ್ಳದೆ ಕಾರನ್ನು ಮತ್ತಷ್ಟು ವೇಗವಾಗಿ ಚಲಾಯಿಸಿದ್ದಾನೆ. ಹಲವರು ವಿಡಿಯೋ ಮಾಡಿದ್ದಾರೆ. ಸರಿಸುಮಾರು 2 ಕಿಲೋಮೀಟರ್‌ಗಿಂತ ಹೆಚ್ಚು ದೂರದವರಗೆ ನಾಯಿ ಓಡುತ್ತಿರುವ ವಿಡಿಯೋ ಸೆರೆಯಾಗಿದೆ. ಆದರೆ ಮಾಲೀಕ ಮಾತ್ರ ಕಾರು ನಿಲ್ಲಿಸಿಲ್ಲ. ಆತನ ಮನಸ್ಸು ಕರಗಿಲ್ಲ. ನಾಯಿಯನ್ನು ಬಿಟ್ಟು ತೆರಳಿದ್ದಾನೆ.

ಹಲವು ಕಿಲೋಮೀಟರ್‌ ವರೆಗೆ ಕಾರನ್ನು ಹಿಂಬಾಲಿಸಿದ ನಾಯಿ ಬಸವಳಿದಿದೆ. ಆದರೆ ಕಾರಿನ ವೇಗ ಮತ್ತಷ್ಟು ಹೆಚ್ಚಾಗುತ್ತಾ ಹೋಗಿದೆ. ಹೀಗಾಗಿ ನಾಯಿ ತೀವ್ರ ಬಸವಳಿದಿದೆ. ಮಾಲೀಕ ತಾನು ಸಾಕಿದ ನಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋಗುವಲ್ಲಿ ಯಶಸ್ವಿಯಾಗಿದ್ದಾನೆ. ನಾಯಿ ಮಾತ್ರ ಅನಾಥವಾಗಿದೆ.

ಹೆದ್ದಾರಿಯಲ್ಲಿ ಕಾರಿನ ಹಿಂದೆ ಓಡಿದ ನಾಯಿ ವಾಹನಕ್ಕೆ ಡಿಕ್ಕಿಯಾಗುವ ಸಾಧ್ಯತೆ ಹೆಚ್ಚು. ಮನೆಯಲ್ಲಿ ಬೆಳೆದ ನಾಯಿಗೆ ಬೀದಿಯಲ್ಲಿ ಬದಕಲು ಸಾಧ್ಯವಿಲ್ಲ. ಇತರ ನಾಯಿಗಳ ದಾಳಿ, ವಾಹನಗಳ ನಡುವೆ ಓಡಾಟ ಸಾಧ್ಯವಿಲ್ಲ. ಈ ರೀತಿ ಕ್ರೂರ ಮನಸ್ಸಿದ್ದವರು ನಾಯಿ ಸಾಕಬಾರದು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಕೆಲವರು ಪೊಲೀಸರಿಗೆ ಇತನ ಕಾರ್ ನಂಬರ್ ಮತ್ತು ಈತನ ಗುರುತು ಕೊಡೊಣ. ಆವಾಗ ಬೀದಿಯಲ್ಲಿ ಬಿಟ್ಟು ಹೋದ ನಾಯಿಯನ್ನು ಆತನ ಮನೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ನಾಯಿಯನ್ನು ಸರಿಯಾಗಿ ಸಾಕಲು, ಆರೈಕೆ ಮಾಡಲು ಆಗದಿದ್ದರೆ ನಾಯಿ ಸಾಕಬಾರದಿತ್ತು. ನಾಯಿಗೆ ಆರೋಗ್ಯ ಕೆಟ್ಟಾಗ, ವಯಸ್ಸಾದಾಗ, ಕೂದಲು ಸುಕ್ಕಾದಾಗ ರಸ್ತೆಯಲ್ಲಿ ಬಿಡುವುದು ಸರಿಯಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *