13 ವರ್ಷದ ವಿದ್ಯಾರ್ಥಿಯಿಂದ ಗರ್ಭಿಣಿಯಾದ 23 ವರ್ಷದ ಶಿಕ್ಷಕಿಯ ಗರ್ಭಪಾತಕ್ಕೆ ಕೋರ್ಟ್‌ ಅನುಮತಿ

ರಾಷ್ಟೀಯ

ಗಾಂಧಿನಗರ: 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿ, ಆತನಿಂದಲೇ ಗರ್ಭಿಣಿಯಾಗಿ ಸದ್ಯ ಪೋಕ್ಸೊ ಕಾಯ್ದೆಯಡಿ ಬಂಧನದಲ್ಲಿರುವ 23 ವರ್ಷದ ಶಿಕ್ಷಕಿಯ ಗರ್ಭಪಾತಕ್ಕೆ ಗುಜರಾತ್‌ನ ಸೂರತ್‌ನ ವಿಶೇಷ ಪೋಕ್ಸೋ ನ್ಯಾಯಾಲಯ ಅನುಮತಿ ನೀಡಿದೆ. ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಪ್ರಕರಣದಲ್ಲಿ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ, ಸದ್ಯ ಸೂರತ್‌ನ ಜೈಲಿನಲ್ಲಿದ್ದಾಳೆ.

ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿರುವ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತು. ಆಕೆಯ ಮಾನಸಿಕ ತೊಂದರೆಗಳನ್ನು ಗಣನೆಗೆ ತೆಗೆದುಕೊಂಡು ಈ ತೀರ್ಪು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಬಾಲಕ ನಾಪತ್ತೆಯಾದ ಬಳಿಕ ಈ ಬಗ್ಗೆ ಆತನ ತಂದೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸೂರತ್ ನಗರದ ಪುಣೆ ಠಾಣೆಯ ಪೊಲೀಸರು ಇವರನ್ನು ದೂರು ದಾಖಲಾದ 6 ದಿನಗಳ ನಂತರ ಗುಜರಾತ್‌-ರಾಜಸ್ಥಾನ ಗಡಿಯಲ್ಲಿ ಪತ್ತೆ ಹಚ್ಚಿದ್ದರು. ಈ ವೇಳೆ ಶಿಕ್ಷಕಿ 20 ವಾರಗಳ ಗರ್ಭಿಣಿಯಾಗಿದ್ದಳು‌.

ಪ್ರಕರಣದ ಹಿನ್ನೆಲೆ

ಸೂರತ್ ನಗರದ ಪುಣೆ ಪೊಲೀಸ್ ಠಾಣೆಯಲ್ಲಿ ಏಪ್ರಿಲ್‌ನಲ್ಲಿ 13 ವರ್ಷದ ಬಾಲಕನನ್ನು ಅಪಹರಣ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿತ್ತು. ಬಾಲಕನ ತಂದೆ ಈ ದೂರು ನೀಡಿದ್ದರು. ಆ ಮೂಲಕ ಪ್ರಕರಣದ ಸುಳಿ ಬಿಚ್ಚತೊಡಗಿತು. ಈ ದೂರಿನಲ್ಲಿ ಶಾಲೆ ಮತ್ತು ಟ್ಯೂಷನ್ ಶಿಕ್ಷಕಿ ಮೇಲೆ ಬಾಲಕನ ತಂದೆ ಅನುಮಾನ ವ್ಯಕ್ತಪಡಿಸಿದ್ದರು. ದೂರಿನನ್ವಯ ಪೊಲೀಸರು ನಗರದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದರು. ಕೊನೆಗೆ ಏ.30 ರಂದು ಜೈಪುರದಿಂದ ಹಿಂದಿರುಗುತ್ತಿದ್ದಾಗ ಶಮ್ಲಾಜಿ ಗಡಿ ಬಳಿಯಲ್ಲಿ ಶಿಕ್ಷಕಿ ಮತ್ತು ಅಪ್ರಾಪ್ತ ಬಾಲಕನನ್ನು ಬಂಧಿಸಲಾಯಿತು. ಇಬ್ಬರು ಬಸ್‌ನಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದರು.

ವಿದ್ಯಾರ್ಥಿಗೆ ಶಾಲೆಯಲ್ಲಿ ಮತ್ತು ಟ್ಯೂಷನ್’ನಲ್ಲಿ ಕಲಿಸುತ್ತಿದ್ದ ಶಿಕ್ಷಕಿ ಮತ್ತು ವಿದ್ಯಾರ್ಥಿ ಮಾಗೋಬ್ ಪ್ರದೇಶದ ಒಂದೆ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದರು. ವಿದ್ಯಾರ್ಥಿಯ ಕುಟುಂಬವು ರಾಜಸ್ಥಾನ ಮೂಲದವರಾಗಿದ್ದರೆ, ಶಿಕ್ಷಕಿ ಮೆಹ್ಸಾನಾ ಮೂಲದವಳು. ಒಂದೆ ಕಟ್ಟಡದ 3ನೇ ಮಹಡಿಯಲ್ಲಿ ಶಿಕ್ಷಕಿ ಮತ್ತು 2ನೇ ಮಹಡಿಯಲ್ಲಿ ವಿದ್ಯಾರ್ಥಿಯ ಕುಟುಂಬ ವಾಸಿಸುತ್ತಿತ್ತು. ಶಿಕ್ಷಕಿ ಕಳೆದ 3 ವರ್ಷಗಳಿಂದ ಆ ವಿದ್ಯಾರ್ಥಿಗೆ ಪಾಠ ಹೇಳಿಕೊಡುತ್ತಿದ್ದಳು.

ಪೋಕ್ಸೊ ಕಾಯ್ದೆಯಡಿ ಪ್ರಕರಣ

ಬಂಧನದ ನಂತರ ಶಿಕ್ಷಕಿಯನ್ನು ವಿಚಾರಣೆಗೊಳಿಪಡಿಸಿದಾಗ, ಬಾಲಕನೊಂದಿಗೆ ದೈಹಿಕ ಸಂಬಂಧ ಬೆಳೆಸಿರುವುದನ್ನು ಒಪ್ಪಿಕೊಂಡಿದ್ದಳು. ಶಿಕ್ಷಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಕೆ 20 ವಾರ, 4 ದಿನದ ಗರ್ಭಿಣಿ ಎಂಬುದು ದೃಢವಾಗಿತ್ತು. ವಿದ್ಯಾರ್ಥಿ ಕಳೆದ 3 ವರ್ಷಗಳಿಂದ ಶಿಕ್ಷಕಿಯಿಂದ ಟ್ಯೂಷನ್ ತೆಗೆದುಕೊಳ್ಳುತ್ತಿದ್ದ. ಈ ಹಿಂದೆ ಮೂವರು ವಿದ್ಯಾರ್ಥಿಗಳು ಟ್ಯೂಷನ್‍ಗೆ ಬರುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಈ ವಿದ್ಯಾರ್ಥಿ ಮಾತ್ರ ಟ್ಯೂಷನ್‍ಗಾಗಿ ಶಿಕ್ಷಕಿಯ ಮನೆಗೆ ಹೋಗುತ್ತಿದ್ದ. ಇದರಿಂದ ಇವರಿಬ್ಬರ ನಡುವೆ ಸಂಬಂಧ ಬೆಳೆದಿತ್ತು ಎನ್ನಲಾಗಿದೆ.

ಪೊಲೀಸರ ಪ್ರಕಾರ, 23 ವರ್ಷದ ಶಿಕ್ಷಕಿ ಮದುವೆಯ ಕುರಿತು ಒತ್ತಡದಲ್ಲಿದ್ದಳು. ವಿದ್ಯಾರ್ಥಿಯು ಓದುವ ವಿಚಾರಕ್ಕೆ ತನ್ನ ಕುಟುಂಬದಿಂದ ಬೈಗುಳವನ್ನು ಕೇಳುತ್ತಿದ್ದನಂತೆ. ಹೀಗಾಗಿ ಇದು ಶಿಕ್ಷಕಿ ಹಾಗೂ ವಿದ್ಯಾರ್ಥಿಗೆ ಓಡಿ ಹೋಗಲು ಪ್ರೇರೆಪಿಸಿತು ಎನ್ನಲಾಗಿದೆ.

Leave a Reply

Your email address will not be published. Required fields are marked *