ಶಾದೋಲ್: ಮಧ್ಯಪ್ರದೇಶದ ಶಾದೋಲ್ ಜಿಲ್ಲೆಯ ಶಾಲೆಗೆ 24 ಲೀಟರ್ ಬಣ್ಣ ಬಳಿಯಲು ವೆಚ್ಚ ಮಾಡಿದ್ದು ಬರೋಬ್ಬರಿ 3.38 ಲಕ್ಷ ರೂ. ಅಷ್ಟೇ ಅಲ್ಲದೇ ಬಣ್ಣ ಹಚ್ಚಲು 443 ಕೂಲಿಯಾಳುಗಳನ್ನು ಬಳಸಿಕೊಳ್ಳಲಾಗಿದೆ.
ಇಂತಹ ಹಗರಣ ಬೆಳಕಿಗೆ ಬಂದಿದ್ದು ಈ ಬಿಲ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆದಮೇಲೆ ಎನ್ನುವುದು ವಿಶೇಷ. ಈಗ ಶಿಕ್ಷಣಾಧಿಕಾರಿಗಳು ಹಗರಣದ ತನಿಖೆಗೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದರೆ ಅಲ್ಲಿನ ಮುಖ್ಯೋಪಾಧ್ಯಾಯರು ಮಾಧ್ಯಮಗಳಿಂದ ದೂರ ಓಡಿದ್ದಾರೆ. ಎರಡು ಶಾಲೆಗಳಿಗೆ ಬಣ್ಣ ಬಳಿಯಲು 215 ಮೇಸ್ತ್ರಿಗಳು ಹಾಗೂ 443 ಕೂಲಿಯಾಳುಗಳ ಬಳಕೆಯಾಗಿದ್ದಾರೆ ಎಂದು ಬಿಲ್ ನೀಡಲಾಗಿದೆ. ಎರಡು ಶಾಲೆಗಳಿಗೆ ಹಚ್ಚಲು ಬಣ್ಣ ತಂದಿದ್ದು 4,704 ರೂ. ಬೆಲೆಯ 24 ಲೀಟರ್ ಮಾತ್ರ.
ಅಕ್ರಮದ ಬಗ್ಗೆ ಮಾತನಾಡದ ಪ್ರಿನ್ಸಿಪಾಲ್
ಮೊದಲ ಶಾಲೆ ಸಕಾಂಡಿ ಗ್ರಾಮದ್ದು. ಇಲ್ಲಿ 4 ಲೀಟರ್ ಬಣ್ಣ ತರಿಸಲಾಗಿದ್ದು ಅದರ ಬೆಲೆ 784 ರೂ. ಇದಕ್ಕೆ 168 ಕೂಲಿಯಾಳುಗಳು 65 ಮೇಸ್ತ್ರಿಗಳನ್ನು ಬಳಸಲಾಗಿದೆ. ಇವರಿಗೆ 1,06,984 ರೂ. ನೀಡಲಾಗಿದೆ. ಇನ್ನು ಎರಡನೆಯದ್ದು ನಿಪಾನಿಯಾ ಗ್ರಾಮದ ಪ್ರಾಥಮಿಕ ಶಾಲೆ. ಇಲ್ಲಿತರಿಸಿದ್ದು 20 ಲೀಟರ್ ಬಣ್ಣ. ಇದಕ್ಕೆ ಬಳಕೆಯಾದ 150 ಮೇಸ್ತ್ರಿಗಳು ಹಾಗೂ 275 ಕೂಲಿಯಾಳುಗಳ ವೆಚ್ಚ 2,31,650 ರೂ. ಮಾತ್ರ ಈ ಶಾಲೆಯ ಗೋಡೆ, ಬಾಗಿಲು ಮತ್ತು ಕಿಟಕಿಗಳಿಗೆ ಬಣ್ಣ ಹಚ್ಚಲಾಗಿದೆ.
ಈ ಎರಡು ಬಣ್ಣ ಹಚ್ಚುವ ಕಾರ್ಯಕ್ಕೆ ಒಬ್ಬರೇ ಗುತ್ತಿಗೆದಾರ. ಸುಧಾಕರ್ ಎಂಬ ಗುತ್ತಿಗೆದಾರನಿಗೆ ಮೇ.5 ರಂದು ಬಿಲ್ ಪಾವತಿಸಲಾಗಿದೆ. ಈ ಬಿಲ್‌ಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿ ಮಾಡಲಾಗಿದೆ.
ಈ ಬಗ್ಗೆ ವಿಶಾಲಕುಮಾರ ಎಂಬುವವರು ಟ್ವೀಟ್ ಮಾಡಿದ್ದು, ಮಧ್ಯಪ್ರದೇಶದ ಶಹಡೋಲ್ ಜಿಲ್ಲೆಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಸಕಂಡಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆಗೆ ಬಣ್ಣ ಹಚ್ಚಲು 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳನ್ನು ಬಳಸಲಾಗಿದೆ. ಕೇವಲ ನಾಲ್ಕು ಲೀಟರ್ ಬಣ್ಣವನ್ನು ಗೋಡೆಗೆ ಹಚ್ಚಲು ಇಷ್ಟು ಜನರನ್ನು ಬಳಸಿದ್ದು ಹೇಗೆ ಎಂಬುದು ಪ್ರಶ್ನೆಯಾಗಿದೆ.
ಶಹಡೋಲ್ ಜಿಲ್ಲೆಯ ಸಕಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆಯ ಗೋಡೆಗೆ ಬಣ್ಣ ಹಚ್ಚುವ ಕೆಲಸವಿತ್ತು. ಕೇವಲ 4 ಲೀಟರ್ ಬಣ್ಣ ಬಳಸಬೇಕಿತ್ತು. ಆದರೆ 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳನ್ನು ಕೆಲಸಕ್ಕೆ ನೇಮಿಸಲಾಯಿತು. ಇದು ಗಣಿತ ಮತ್ತು ಮಾನವ ಶಕ್ತಿಯ ಅದ್ಭುತ ಎಂದು ಟ್ವೀಟ್ ಮಾಡಿದ್ದಾರೆ.
ಶಾಲಾ ದುರಸ್ತಿಯೋ ಅಥವಾ ಹಗಲು ದರೋಡೆಯೋ
ಮೊಹಾದ್ ಶಹಬಾದಖಾನ್ ಟ್ವೀಟ್ ಮಾಡಿದ್ದು, ಮಧ್ಯಪ್ರದೇಶದ ಬಿಜೆಪಿ ಡಬಲ್ ಎಂಜಿನ್ ಸರ್ಕಾರದಲ್ಲಿ ಬಣ್ಣದ ಹಗರಣ ನಡೆದಿದೆ. ಶಹಡೋಲ್ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದು ಗೋಡೆಗೆ ಕೇವಲ 4 ಲೀಟರ್ ಬಣ್ಣ ಹಾಕಲು 1,06,206 ಖರ್ಚು ಮಾಡಿದೆ ಎಂದು ವರದಿಯಾಗಿದೆ. ಇದರಲ್ಲಿ 168 ಕಾರ್ಮಿಕರು, 65 ಮೇಸ್ತ್ರಿಗಳು ಕೆಲಸ ಮಾಡಿದ್ದಾರೆ. ಕೇವಲ 4 ಲೀಟರ್ ಬಣ್ಣ ಮಾತ್ರ ಬಳಸಲಾಗಿದೆ. ಜಿಲ್ಲಾ ಶಿಕ್ಷಣಾಧಿಕಾರಿಗಳು ಇದನ್ನು ಅನುಮೋದಿಸಿದ್ದಾರೆ. ಇದು ಶಾಲಾ ದುರಸ್ತಿಯೋ ಅಥವಾ ಹಗಲು ದರೋಡೆಯೋ ಎಂದು ಅನುಮಾನ ವ್ಯಕ್ತವಾಗಿದೆ.
ಶಹಡೋಲ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಕೇವಲ 4 ಲೀಟರ್ ಬಣ್ಣ ಹಾಕಲು ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಖರ್ಚು ಮಾಡಿರುವುದು ಆಶ್ಚರ್ಯ ತಂದಿದೆ. “168 ಕಾರ್ಮಿಕರು, 65 ಮೇಸ್ತ್ರಿಗಳು, ಕೇವಲ 4 ಲೀಟರ್ ಬಣ್ಣ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲಾ ಶಿಕ್ಷಣಾಧಿಕಾರಿಗಳು ಈ ಬಿಲ್ ಹೇಗೆ ಎಂದು ಪ್ರಶ್ನಿಸಿದ್ದಾರೆ.