ಕಾರವಾರ: ಕಳೆದ 30 ವರ್ಷಗಳ ಹಿಂದೆ ನೌಕರಿ ನೀಡುವುದಾಗಿ ನಂಬಿಸಿ 200 ರೂ. ವಂಚನೆ ಮಾಡಿದ್ದ ಆರೋಪಿಯನ್ನು ಶಿರಸಿ ಗ್ರಾಮೀಣ ಪೊಲೀಸರು ತೀವ್ರ ಹುಡುಕಾಟದ ನಂತರ ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ವಂಚನೆಯ ಮೊತ್ತಕ್ಕಿಂತ ಪ್ರಕರಣದ ಗಂಭೀರತೆ ಮತ್ತು ಕಾಲಾವಧಿ ಗಮನ ಸೆಳೆಯುತ್ತಿದೆ.
ಘಟನೆ ಹಿನ್ನಲೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 30 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಆರೋಪಿ 200 ರೂ. ತೆಗೆದುಕೊಂಡಿದ್ದನು. ಆದರೆ ನೌಕರಿ ನೀಡದೆ ವಂಚಿಸಿದ್ದನ್ನು. ಅಂದಿನ ದೂರುದಾರ ಗಂಭೀರವಾಗಿ ತೆಗೆದುಕೊಂಡು ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದನು. ಇದರೊಂದಿಗೆ ಈ ಪ್ರಕರಣವು ಪತ್ತೆಯಾಗದ ಅರ್ಜಿಯಾಗಿ ಉಳಿದಿತ್ತು.
ಆರೋಪಿ ಪತ್ತೆ ಹಚ್ಚಿದ ಪೊಲೀಸರು
ಈ ಹಿಂದೆ ಕಣ್ಣು ತಪ್ಪಿಸಿಕೊಂಡಿದ್ದ ಬೈಂದೂರಿನ ಬಿ.ಕೆ ರಾಮಚಂದ್ರರಾವ್ ಎಂಬಾತನನ್ನು ಶಿರಸಿ ಗ್ರಾಮೀಣ ಠಾಣೆಯ ಪಿಎಸ್‌ಐ ಸಂತೋಷಕುಮಾರ ಎಂ. ಹಾಗೂ ಸಿಬ್ಬಂದಿ ಅಶೋಕ ರಾಠೋಡ ನೇತೃತ್ವದ ತಂಡವು ಬೆಂಗಳೂರು ಬಳೆಪೇಟೆಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧನ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಾಘವೇಂದ್ರ ಜಿ. ಹಾಗೂ ಮಾರುತಿ ಗೌಡ ಸಹಭಾಗಿಯಾಗಿದ್ದರು. ಬಂಧಿತ ಆರೋಪಿಯನ್ನು ಶಿರಸಿಗೆ ಕರೆದೊಯ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ನೀಡಲಾಗಿದೆ.
200 ರೂ. ಹಳೆಯ ವಂಚನೆ ಪ್ರಕರಣ, ನಿಷ್ಠೆ ಮತ್ತು ಕಾನೂನು ಪಾಲನೆಯ ವಿಜಯ ಎಂಬಂತೆ 30 ವರ್ಷದ ಬಳಿಕ ಪೊಲೀಸ್ ಇಲಾಖೆ ಆರೋಪಿಯನ್ನು ಪತ್ತೆ ಹಚ್ಚಿರುವುದು ಶ್ಲಾಘನೀಯ. ಇದು ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶ ಮತ್ತೊಮ್ಮೆ ಸಾಬೀತು ಮಾಡಿದೆ.