ಹಾಸನ: ಹಾಸನಾಂಬ ದರ್ಶನೋತ್ಸವ ಆರಂಭಗೊಂಡು ಕೇವಲ ಒಂದೆ ವಾರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಇಲ್ಲಿಯವರೆಗೂ 15 ಲಕ್ಷ 30 ಸಾವಿರ ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದುಕೊಂಡಿದ್ದಾರೆ. ಇನ್ನು ಕೇವಲ 8 ದಿನದಲ್ಲಿ ದೇವಾಲಯಕ್ಕೆ 10.5 ಕೋಟಿ ರೂ. ಆದಾಯ ಹರಿದು ಬಂದಿದ್ದು ದಾಖಲೆಯಾಗಿದೆ. ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಿರುವುದರಿಂದ ಭಕ್ತರು ಸುಗಮವಾಗಿ ದರ್ಶನ ಪಡೆಯುತ್ತಿದ್ದಾರೆ. ಇದರಿಂದಾಗಿ ಭಕ್ತರಲ್ಲಿ ಸಂತಸ ಮೂಡಿದೆ. ನಾಡಿನ ನಾನಾ ಭಾಗಗಳಿಂದ ಭಕ್ತರ ದಂಡೆ ಹಾಸನಾಂಬೆಯ ದರ್ಶನಕ್ಕೆ ಹರಿದು ಬರುತ್ತಿದೆ. ಇನ್ನೂ ಐದು ದಿನ ಹಾಸನಾಂಬ ಜಾತ್ರಾ ಮಹೋತ್ಸವ ಇದ್ದು, ಈ ಐದು ದಿನದಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಹಾಸನಾಂಬೆ ದರ್ಶನ ಬಗ್ಗೆ ಡಿಸಿ ಹೇಳಿದ್ದಿಷ್ಟು
ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಕ್ರವಾರ ಹಿನ್ನೆಲೆಯಲ್ಲಿ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದಾರೆ. ಶುಕ್ರವಾರ 1 ಲಕ್ಷ 60 ಸಾವಿರ ಭಕ್ತರು ದರ್ಶನ ಮಾಡಿದ್ದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಎಲ್ಲಾ ಸರತಿ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ. ಇಂದು 4 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆಯುವ ನಿರೀಕ್ಷೆ ಇದೆ. ನಾನೇ ಧರ್ಮ ದರ್ಶನದ ಸಾಲಿನಲ್ಲಿ ಬಂದು 3 ಗಂಟೆ ನಂತರ ದರ್ಶನ ಪಡೆದಿದ್ದೆನೆ, ಈಗ ಸಮಯ ಹೆಚ್ಚಾಗುತ್ತಿದೆ. ಕೆಲವು ಭಕ್ತರು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಬೆಳಗ್ಗೆ 7 ಗಂಟೆಗೆ ಸಾಲಿನಲ್ಲಿ ನಿಂತವರು, ಸಂಜೆ 4 ಗಂಟೆಗೆ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಗರ್ಭಗುಡಿ ಬಳಿ ತಳ್ಳುತ್ತಿದ್ದಾರೆಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಭಕ್ತರು ಶಾಂತಿಯಿಂದ ಸಹಕರಿಸಬೇಕು. 1000 ರೂ ಕೊಟ್ಟು ಬಂದರೆ ಸರತಿ ಸಾಲು ಕಡಿಮೆ ಇರುತ್ತದೆ ಅಷ್ಟೇ, ಅನುಕೂಲವಾಗಲಿ ಎಂದು ಮಾಡಿದ್ದೆವೆ ಹೊರತು ಹಣ ಮಾಡಲು ಅಲ್ಲ. ಎರಡರಿಂದ ಮೂರು ಪಟ್ಟು ಹೆಚ್ಚು ಭಕ್ತರು ಬಂದಿದ್ದಾರೆ. ಮುಂದೆ ಒಂದು ದಿನದಲ್ಲಿ ಭಕ್ತರ ಸಂಖ್ಯೆ ಐದು ಲಕ್ಷ ಮೀರಬಹುದು ಎಂದು ತಿಳಿಸಿದರು.
ಧರ್ಮ ದರ್ಶನದ ಸಾಲಿನಲ್ಲಿ ಬರುತ್ತಿರುವವರಿಗೆ 7ರಿಂದ 8 ಗಂಟೆ, 1000 ರೂ ಟಿಕೆಟ್ ಪಡೆದವರಿಗೆ 3ರಿಂದ 4 ಗಂಟೆ ಮತ್ತು 300 ರೂ. ಟಿಕೆಟ್ ಪಡೆದವರಿಗೆ 6ರಿಂದ 7 ಗಂಟೆ ಸಮಯ ಆಗುತ್ತಿದೆ. ಹಾಸನಾಂಬೆ ದರ್ಶನಕ್ಕೆ ನಿಮಗೆ ಸಿಗುವುದು ಕೆಲ ಸೆಕೆಂಡ್‌ಗಳು ಮಾತ್ರ. ಪೂರ್ವ ತಯಾರಿ ಮಾಡಿಕೊಂಡು ಬಂದು ಆಶೀರ್ವಾದ ಪಡೆಯಿರಿ. ಮೊದಲು ತಾಳ್ಮೆ ಕಲಿಯಿರಿ, ಮೊಬೈಲ್‌ಫೋನ್ ಬಳಸಬೇಡಿ. ಮಕ್ಕಳನ್ನು ಮೇಲೆತ್ತಿಕೊಂಡು ಬನ್ನಿ. ತುಂಬಾ ಒತ್ತಡ ಇದೆ. ದ್ವಾರ ಬಾಗಿಲು ಬಂದ ವೇಳೆಯೇ ದೇವಿ ಕಡೆಗೆ ನೋಡಿ ಎಂದು ಮನವಿ ಎಂದು ಭಕ್ತರಿಗೆ ಡಿಸಿ ಕೆ.ಎಸ್ ಲತಾಕುಮಾರಿ ಮಾನವಿ ಮಾಡಿದರು.