ಕಲಬುರಗಿ: ಪರಸ್ಪರ ಸಹೋದರತ್ವ, ಎಲ್ಲರು ಒಂದೆ ಎಂಬ ಐಕ್ಯತೆ ಮನೋಭಾವ ಮೂಡಿದಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿ, ದೇಶದ ಪ್ರಗತಿ ಸಾಧ್ಯ ಎಂದು ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ರಾಷ್ಟ್ರೀಯ ಸಹೋದರರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಜಾತಿ, ಧರ್ಮ, ಭಾಷೆ, ಪ್ರದೇಶ ಸೇರಿದಂತೆ ಮುಂತಾದ ಅಂಶಗಳ ಮೇಲೆ ಬೇಧ-ಭಾವ ಮಾಡಿದರೆ ಸಮಾಜದ ಶಾಂತಿ ಹಾಳಾಗುತ್ತದೆ ಎಂದರು.
ಸಹೋದರರ ನಡುವಿನ ಭಾಂದವ್ಯ ವೃದ್ಧಿಯಾಗಬೇಕು ಮತ್ತು ಎಲ್ಲರಲ್ಲಿ ಭ್ರಾತೃತ್ವ ಭಾವನೆ ಮೈಗೂಡಲಿ ಎಂಬ ಉದ್ದೇಶದಿಂದ ಈ ದಿನಾಚರಣೆ ಆಚರಣೆಗೆ ತರಲಾಗಿದೆ. ಕುಟುಂಬ ಹಾಗೂ ದೇಶದ ಓಗ್ಗಟ್ಟಿಗಾಗಿ ಜನರ ಐಕ್ಯತೆ ತುಂಬಾ ಪ್ರಮುಖವಾದ ಪಾತ್ರ ವಹಿಸುತ್ತದೆ. ಇಡಿ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಭಯೋತ್ಪಾದನೆಯು ಐಕ್ಯತೆಯ ಕೊರತೆಯಿಂದ ಉಂಟಾಗುತ್ತಿದೆ. ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಭಾತ್ರತ್ವ, ಸೌಹಾರ್ಧತೆ ಹಾಗೂ ಸಹೋದರತೆಯಿಂದ ಸಹ ಜೀವನ ಸಾಗಿಸಿದರೆ ಇಡಿ ಭೂಮಿಯೆ ಸ್ವರ್ಗವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಪ್ರಮುಖರಾದ ಅಸ್ಲಾಂ ಶೇಖ್, ಓಂಕಾರ ವಠಾರ, ರಾಜು ಕೊರಳ್ಳಿ, ಭೀಮರಾಯ ಯಾದಗಿರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.