ಕಲಬುರಗಿ: ಕರ್ನಾಟಕದ ಗಡಿ ಭಾಗದಲ್ಲಿನ ಮರಾಠಿ ಪ್ರಾಬಲ್ಯದಿಂದ ಕನ್ನಡ ಉಳಿಸಿ, ಬೆಳೆಸುವಲ್ಲಿ ಮತ್ತು ಶರಣ ಸಾಹಿತ್ಯದ ರಕ್ಷಕರಾಗಿ ತಮ್ಮದೆಯಾದ ಅಮೂಲ್ಯ ಕೊಡುಗೆ ಶರಣೆ ಜಯದೇವಿ ತಾಯಿ ಲಿಗಾಡೆಯವರು ನೀಡಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಶರಣೆ ಜಯದೇವಿ ತಾಯಿ ಲಿಗಾಡೆಯವರ 113ನೇ ಜಯಂತಿ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಆಧ್ಯಾತ್ಮ ಚಿಂತಕಿ, ಸಮಾಜ ಸೇವಕಿ, ಸಾಹಿತ್ಯ ಸಾಧಕಿಯಾಗಿ ‘ಗಡಿನಾಡು ದುರ್ಗಾ’ ಎಂಬ ಬಿರುದಾಂಕಿತ ಲಿಗಾಡೆಯವರು ಬಹುಮುಖ ವ್ಯಕ್ತಿತ್ವದ ಮೇರು ಸಾಧಕಿಯಾಗಿದ್ದಾರೆ. ಕರ್ನಾಟಕ ಏಕೀಕರಣದಲ್ಲಿ ಮುಂಚೂಣಿ ಹೋರಾಟ ಮಾಡುವ ಮೂಲಕ ಅವಿಸ್ಮರಣೀಯರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಶಿಕ್ಷಕರಾದ ಗುರುಲಿಂಗಯ್ಯ ಮಠ, ಆದರ್ಶ ವಡ್ಡನಕೇರಿ, ವಿಶ್ವನಾಥ ನಂದರ್ಗಿ, ಗೌರಿ ಹಿರೇಮಠ ಮತ್ತು ವಿದ್ಯಾರ್ಥಿಗಳು ಇದ್ದರು.