ಕಲಬುರಗಿ: ತಂದೆಯ ತ್ಯಾಗ, ಪ್ರೀತಿ, ಪ್ರೇಮ ಮರೆಯಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ತನ್ನತನವನ್ನು ತೊರೆದು, ಎಲ್ಲವೂ ಮಕ್ಕಳಿಗಾಗಿ ದಾರೆಯೆರೆಯುವ ಮೂಲಕ ಮಕ್ಕಳ ಭವಿಷ್ಯವನ್ನು ನಿರ್ಮಿಸುವ ಶಿಲ್ಪಿ ತಂದೆಯಾಗಿದ್ದಾನೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಆಯೋಜಿಸಲಾಗಿದ್ದ ‘ವಿಶ್ವ ಅಪ್ಪಂದಿರ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಇಡಿ ಜೀವನದುದ್ದಕ್ಕೂ ಕುಟುಂಬದ ಲೇಸನ್ನು ಬಯಸುವ ಕೌಟುಂಬಿಕ ವ್ಯವಸ್ಥೆಯ ಸಫಲತೆಯಲ್ಲಿ ತಂದೆಯ ಪಾತ್ರ ಅನನ್ಯವಾಗಿದೆ ಎಂದರು.
ಸಮಾಜ ಸೇವಕ ರೇವಣಸಿದ್ದಪ್ಪ ಪವಾಡಶೆಟ್ಟಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಮೌಲ್ಯಗಳು, ನೀಡಿ, ಜೋಪಾನ ಮಾಡಿ ಮಗುವನ್ನು ದೊಡ್ಡವನನ್ನಾಗಿ ಮಾಡುವಲ್ಲಿ ತಂದೆಯ ಪಾತ್ರ ಮರೆಯುವಂತಿಲ್ಲ. ಆತನ ಇಳಿ ವಯಸ್ಸಿನಲ್ಲಿ ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಮಕ್ಕಳು ಎಂದಿಗೂ ಮಾಡಬಾರದು. ತಾಯಿ-ತಂದೆಗೆ ಸಮಾನವಾದ ಗೌರವ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಮತ್ತು ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.