ಕಲಬುರಗಿ: ಯಾವ ಪ್ರದೇಶಗಳಲ್ಲಿ ಗಾಳಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ ಸಾಧ್ಯವೋ, ಅಲ್ಲಿ ಪವನ-ವಿದ್ಯುಚ್ಛಕ್ತಿ ಕೇಂದ್ರಗಳ ಸ್ಥಾಪನೆ ಮಾಡಿ, ವಿದ್ಯುಚ್ಛಕ್ತಿ ಉತ್ಪಾದಿಸುವುದರತ್ತ ಗಮನಹರಿಸಬೇಕಾಗಿರುವುದು ಪ್ರಸ್ತುತವಾಗಿ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಶಿವ ನಗರದ ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಜಾಗತಿಕ ಪವನ ಶಕ್ತಿ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಪವನಶಕ್ತಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ ಸಾಧ್ಯವಾಗಿದೆ. ಪರಿಸರ ಮಾಲಿನ್ಯ ರಹಿತವಾಗಿದ್ದು, ಆರ್ಥಿಕ ಮಿತವ್ಯಯ ಸಾಧ್ಯವಿದೆ. ಪವನಶಕ್ತಿಯಿಂದ ವಿದ್ಯುಚ್ಛಕ್ತಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಹಸಿರು ಮನೆ ಪರಿಣಾಮ, ಆಮ್ಲ ಮಳೆ ಸೇರಿದಂತೆ ವಿವಿಧ ಮಾಲಿನ್ಯ ಪರಿಸರಕ್ಕೆ ಹಾನಿಯಾಗುವುದಿಲ್ಲ. ಭಾರತದಲ್ಲಿ 45.887 ಗಿಗಾ ವ್ಯಾಟ್ಸ್ ಪವನ ಶಕ್ತಿಯ ಸಾಮರ್ಥ್ಯ ಹೊಂದಿದ್ದು, ಜಾಗತಿಕ ಮಟ್ಟದಲ್ಲಿ 4ನೇ ಸ್ಥಾನ ಪಡೆದಿದೆ. ಇಂತಹ ಅಸಂಪ್ರದಾಯಿಕ ಇಂಧನಗಳ ಸದುಪಯೋಗ ಮಾಡಿಕೊಂಡರೆ ರಾಷ್ಟ್ರದ ಅಭಿವೃದ್ಧಿಯ ವೇಗ ಹೆಚ್ಚಳವಾಗಲು ಸಾಧ್ಯವಾಗುತ್ತದೆ. ಇಂಧನದ ಸಂರಕ್ಷಣೆ ಮತ್ತು ಸೂಕ್ತ ನಿರ್ವಹಣೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾರ ನಿಲೊಫರ್ ಶೇಖ್, ಪೂಜಾ ಹೂಗಾರ, ಪೃತ್ವಿ ಕೋರವಾರ, ಸಾನಿಯಾ ಶೇಖ್ ಮತ್ತು ವಿದ್ಯಾರ್ಥಿಗಳು ಇದ್ದರು.