ಕುಂತಳ ನಾಡಿನ ಕಿರೀಟ ಭೈರಾಮಡಗಿ: ಮುಡುಬಿ ಗುಂಡೇರಾವ

ಜಿಲ್ಲೆ

ಕಲಬುರಗಿ: ಪ್ರಾಚೀನ ಕರ್ನಾಟಕದ ಆಡಳಿತದ ಘಟಕವಾಗಿದ್ದ ಕುಂತಳ ನಾಡಿನ ಪ್ರಮುಖ ಧಾರ್ಮಿಕ, ಶೈಕ್ಷಣಿಕ, ವಾಣಿಜ್ಯ ಕೇಂದ್ರವಾಗಿ ಮೆರೆದ ಭೈರಾಮಡಗಿಯು ಕುಂತಳ ನಾಡಿನ ಕಿರೀಟವಾಗಿ ಇತಿಹಾಸದಲ್ಲಿ ವಿಜ್ರಂಭಿಸಿದೆ ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೇರಾವ ಹೇಳಿದರು.

ಜಿಲ್ಲೆಯ ಅಫಜಲಪುರ ತಾಲೂಕಿನ ಭೈರಾಮಡಗಿಯ ಐತಿಹಾಸಿಕ ಕಾಲಭೈರೇಶ್ವರ ದೇವಾಲಯದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-22ರಲ್ಲಿ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದ ಅವರು, ಗ್ರಾಮದಲ್ಲಿ ದೊರೆಯುವ ವೀರಗಲ್ಲುಗಳು, ಮಹಾಸತಿಗಲ್ಲುಗಳು, ಶಿಲ್ಪಗಳು, ಚದುರಿಬಿದ್ದ ದೇವಾಲಯದ ಸ್ಥಂಭಗಳು, ಮತ್ತಿತರ ಇತಿಹಾಸದ ಪಳಯುಳಿಕೆಗಳು ನಾಡಿನ ಇತಿಹಾಸವನ್ನು ಸಾರುತ್ತವೆ. ಕನ್ನಡಿಗರ ಹಿರಿಮೆ-ಗರಿಮೆ ಸಾದರಪಡಿಸುವ ಇಲ್ಲಿನ ಸ್ಮಾರಕಗಳು, ಪರಾಚೀನ ಕಾಲದ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ವ್ಯವಸ್ಥೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಭೈರಾಮಡಗಿ ಗ್ರಾಮವು ಗತಕಾಲದಲ್ಲಿ ಕನ್ನಡ ಸಂಸ್ಕೃತಿ ಬೆಳೆಸಿದ ಊರಾಗಿದೆ. ಅಫಜಲಪುರ ತಾಲೂಕಿನ ಚಿನ್ಮಳ್ಳಿ, ಬಂದರವಾಡದಲ್ಲಿ ದೊರೆಯುವ ಸ್ಮಾರಕಗಳು ಭೈರಾಮಡಗಿಯ ಇತಿಹಾಸವನ್ನು ಸಾರುತ್ತವೆ. ಈ ಗ್ರಾಮವು ಸಾವಿರಾರು ವರ್ಷಗಳಿಂದ ವಿವಿಧ ಧರ್ಮಿಯರು ಮತ್ತು ಸಮುದಾಯದವರು ಬಾಳಿ ಬೆಳಗುತ್ತಾ ಬಂದಿರುವ ಒಂದು ಪುಟ್ಟ ಭಾರತವಾಗಿ ಇಂದಿಗೂ ಕೂಡಾ ಕಂಗೊಳಿಸುತ್ತಿದೆ. ಕಾಲಭೈರೇಶ್ವರ ದೇವರು ನೆಲೆನಿಂತ ಗ್ರಾಮವು ಭೈರಾಮಡಗಿ ಎಂಬ ನಾಮಾಂಕಿತ ಪಡೆದಿದೆ ಎಂದು ವಿವರಿಸಿದರು.

ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ನೆಲದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕು ಮತ್ತು ಗ್ರಾಮಸ್ಥರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ನಮ್ಮ ಬಳಗವು ಹಳ್ಳಿಯತ್ತ ಸಂಚರಿಸುತ್ತಾ, ಕಳೆದ ಒಂದು ವರ್ಷದಿಂದ ಜಿಲ್ಲೆಯ ಐತಿಹಾಸಿಕ ಸ್ಥಳ ಪರಿಚಯಾತ್ಮಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜರುಗುತ್ತಿವೆ ಎಂದರು.

ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ದೇವಸ್ಥಾನದ ಅರ್ಚಕ ಖಂಡೋಬಾ ಜೋಗಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *