ಕಲಬುರಗಿ: ರಕ್ತದಾನ ಜೀವದಾನಕ್ಕೆ ಸಮ, ಮತ್ತೊಬ್ಬರಿಗೆ ಮಾಡಿದ ರಕ್ತದಾನದಿಂದ ವ್ಯಕ್ತಿ ಸತ್ತ ನಂತರವು ತಾನು ಬದುಕಿನ ಸಾರ್ಥಕತೆ ಪಡೆಯಲು ಸಾಧ್ಯ ಎಂದು 18 ಬಾರಿ ರಕ್ತದಾನ ಮಾಡಿದ ಮಾಜಿ ಸೈನಿಕ ರೇಣುಕಾಚಾರ್ಯ ಸ್ಥಾವರಮಠ ಮಾರ್ಮಿಕವಾಗಿ ಹೇಳಿದರು.
ನಗರದ ಗಾಂಧಿ ನಗರದ ಆಚಾರ್ಯ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ‘ವಿಶ್ವ ರಕ್ತದಾನ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದ ಬೇಡಿಕೆ ಮತ್ತು ರಕ್ತದಾನದ ಪ್ರಮಾಣದ ನಡುವೆ ವ್ಯತ್ಯಾಸವಿದೆ. ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾಗಬೇಕಾಗಿದೆ. ಒಬ್ಬರು ಒಂದು ಯುನಿಟ್ ರಕ್ತದಾನ ಮಾಡಿದರೆ, ಮೂವರ ಜೀವ ಉಳಿಸಬಹುದಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನ ಬಿರಾದಾರ ಮಾತನಾಡಿ, ರಕ್ತದಾನದಿಂದ ದೇಹಕ್ಕೆ ತೊಂದರೆಯಾಗುತ್ತದೆ ಎಂಬ ಭಯ, ತಪ್ಪು ಕಲ್ಪನೆಗಳಿವೆ. ರಕ್ತದಾನದಿಂದ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ, ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ, ರಕ್ತದೊತ್ತಡ ಹಾಗೂ ಹೃದಯಾಘಾತ ಉಂಟಾಗುವ ಸಂಭವ ಕಡಿಮೆಯಾಗುತ್ತದೆ. ಕಿಡ್ನಿ ತೊಂದರೆ, ಮೆದುಳಿನ ರಕ್ತಸ್ರಾವದಿಂದಾಗುವ ಮೃತ್ಯು ಮತ್ತು ಇನ್ನಿತರ ಘೋರ ಕಾಯಿಲೆಗಳಿಂದ ದೂರವಿರಬಹುದಾಗಿದೆ. ರಕ್ತದಾನದಿಂದ ಸ್ವಂತ ಆರೋಗ್ಯ ವೃದ್ಧಿಸುವುದರ ಜೊತೆಗೆ ಮತ್ತೊಬ್ಬರಿಗೆ ಜೀವದಾನ ಮಾಡಿದಂತಾಗುತ್ತದೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಉಪನ್ಯಾಸಕರಾದ ನಾಗರಾಜ ಹಿರೇಗೌಡ್, ಸುಧಾರಾಣಿ ಮಾಕಾ ಮತ್ತು ವಿದ್ಯಾರ್ಥಿಗಳು ಇದ್ದರು.