ಭಾರತದ ನವೋದಯ ಧೃವತಾರೆ ರಾಜಾ ರಾಮ್ ಮೋಹನರಾಯ

ಜಿಲ್ಲೆ

ಕಲಬುರಗಿ: ಹತ್ತೊಂಬತ್ತನೆ ಶತಮಾನ ಭಾರತದ ಬೌದ್ಧಿಕ, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಬೆಳವಣಿಗೆಯ ಸುಧಾರಣೆಯಲ್ಲಿ ಅದ್ವೀತಿಯ ಪಾತ್ರ ವಹಿಸಿದ ರಾಜಾ ರಾಮ್ ಮೋಹನರಾಯರು, ‘ಭಾರತದ ನವೋದಯ ಧೃವತಾರೆ’ಯಾಗಿದ್ದಾರೆ. ಅವರು ಶ್ರೇಷ್ಟ ಸಮಾಜ ಸುಧಾರಕರು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಜೆ.ಆರ್ ನಗರದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಜಾ ರಾಮ್ ಮೋಹನರಾಯ್’ರ 253ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಮೋಹನರಾಯ್‌ರು ತಮ್ಮ 15ನೇ ವಯಸ್ಸಿನಲ್ಲಿಯೇ ಮೌಢ್ಯತೆ, ಗೊಡ್ಡು ಸಂಪ್ರದಾಯಗಳ ವಿರುದ್ದ ಪ್ರತಿಭಟಿಸಿದರು. ಇದಕ್ಕಾಗಿ ಸಂಪ್ರದಾಯಶರಣ ಮನೆತನವಾದ ತಮ್ಮ ಮನೆಯನ್ನು ತೊರೆಯಬೇಕಾಯಿತು. ‘ಬ್ರಹ್ಮ ಸಮಾಜ’ ಸ್ಥಾಪಿಸಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದರು. ಏಕದೇವೋಪಾಸನೆ, ವಿಗ್ರಹ ಪೂಜೆ ವಿರೋಧ, ಸತಿ ಸಹಗಮನ ಪದ್ಧತಿಯ ನಿರ್ಮೂಲನೆ, ಬಹು ಪತ್ನಿತ್ವ ನಿಷೇಧ, ವಿಧವಾ ವಿವಾಹಕ್ಕೆ ಪ್ರೋತ್ಸಾಹದಂತಹ ಅನೇಕ ಕ್ರಾಂತಿಕಾರಕ ಕಾರ್ಯಗಳನ್ನು ಮಾಡುವ ಮೂಲಕ ನಮ್ಮ ದೇಶದ ಇತಿಹಾಸದಲ್ಲಿ ಪುನರಜ್ಜೀವನದ ಪಿತಾಮಹ ಎಂದು ಕರೆಸಿಕೊಂಡಿದ್ದಾರೆ ಎಂದರು.

ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ರಾಜಾ ರಾಮ್ ಮೋಹನರಾಯ ಅವರು ಸಾಮಾಜಿಕ ಕಾರ್ಯಗಳನ್ನು ಮಾಡುವ ಸಂದರ್ಭದಲ್ಲಿ ಸಾಕಷ್ಟು ವಿರೋಧ, ನೊವುಗಳನ್ನು ಅನುಭವಿಸಿ, ಇವೆಲ್ಲವುಗಳನ್ನು ಮೆಟ್ಟಿ ನಿಂತು ಕ್ರಾಂತಿ ಮಾಡಿದ್ದು ಸಾಮಾನ್ಯವಾದದ್ದಲ್ಲ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಮುಸ್ಕಾನ್ ಶೇಖ್, ನೇಹಾ, ಕಾವೇರಿ ಹೌದೆ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *