ಕಲಬುರಗಿ: ದೇಶದ ಐಕ್ಯತೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏನೇ ನಿರ್ಧಾರಗಳನ್ನು ಅಥವಾ ಕ್ರಮಗಳನ್ನು ಕೈಗೊಂಡರೂ ಅದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದರು.
ಪಹಲ್ಗಾಮ್ ಉಗ್ರ ದಾಳಿ ವಿಚಾರವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ದೇಶಕ್ಕಾಗಿ ಏನೆ ನಿರ್ಧಾರ ಕೈಗೊಂಡರು ಬೆಂಬಲಿಸುತ್ತೆವೆ. ಆದರೆ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದರು.
ಕೇವಲ ಭಾಷಣ ಮಾಡಿಕೊಂಡು ಕುಳಿತುಕೊಂಡರೆ ಸಾಲದು. ನಮ್ಮ ದೇಶದವರನ್ನು ಕೆಣಕಿದವರಿಗೆ ತಕ್ಕ ಉತ್ತರ ಕೊಡಬೇಕು. ಈ ವಿಚಾರದಲ್ಲಿ ರಾಜಕೀಯ ಆಗಬಾರದು ಎಂದು ಖರ್ಗೆ ಹೇಳಿದರು.
ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಬೆಂಬಲ ಕೊಟ್ಟಿದ್ದೆವೆ. ನಮಗೆ ದೇಶ ಮುಖ್ಯ. ಯಾವುದೆ ಕ್ರಮ ಕೈಗೊಂಡರು ಬೆಂಬಲ ಇದ್ದೆ ಇರುತ್ತದೆ ಎಂದು ಖರ್ಗೆ ಮತ್ತೊಮ್ಮೆ ಸ್ಪಷ್ಟಪಡಿಸಿದರು.