ಹರಿದ್ವಾರ: ಉತ್ತರಾಖಂಡದ ಹರಿದ್ವಾರದ ಮಾಜಿ ಬಿಜೆಪಿ ನಾಯಕಿ ಮತ್ತು ಮಹಿಳಾ ಮೋರ್ಚಾದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷೆ ಅನಾಮಿಕಾ ಶರ್ಮಾ ಅವರ ವಿರುದ್ಧ ತನ್ನ 13 ವರ್ಷದ ಮಗಳ ಮೇಲೆ ತನ್ನ ಪ್ರಿಯಕರ ಮತ್ತು ಅವನ ಸಹಾಯಕನಿಂದ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ಆರೋಪ ಕೇಳಿಬಂದಿದೆ.
ಈ ಘಟನೆ ಜನವರಿಯಿಂದ ಮಾರ್ಚ್ 2025ರವರೆಗೆ ಹಲವು ಬಾರಿ ನಡೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿದ್ವಾರ, ಆಗ್ರಾ, ಮತ್ತು ಬೃಂದಾವನದಲ್ಲಿ ಅನಾಮಿಕಾ ಶರ್ಮಾ ಅವರ 30ರ ವಯಸ್ಸಿನ ಪ್ರಿಯಕರ ಸುಮಿತ್ ಪಟ್ವಾಲ್ ಮತ್ತು ಅವನ ಸಹಾಯಕ ಶುಭಂ ಎಂಬಾತನಿಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಅಪರಾಧವು ತಾಯಿಯ ಸಮ್ಮತಿಯೊಂದಿಗೆ ಮತ್ತು ಆಕೆಯ ಸಮ್ಮುಖದಲ್ಲಿ ನಡೆದಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಆರೋಪಿಗಳು ಬಾಲಕಿಯ ತಂದೆಯನ್ನು ಕೊಲ್ಲುವ ಬೆದರಿಕೆ ಹಾಕಿದ್ದರಿಂದ ಆಕೆ ಯಾರಿಗೂ ತಿಳಿಸಿರಲಿಲ್ಲ. ಬುಧವಾರ ಉತ್ತರಾಖಂಡ ಪೊಲೀಸರು ಅನಾಮಿಕಾ ಶರ್ಮಾ ಮತ್ತು ಸುಮಿತ್ ಪಟ್ವಾಲ್‌ರನ್ನು ಹರಿದ್ವಾರದ ಹೋಟೆಲ್‌ನಿಂದ ಬಂಧಿಸಿದ್ದಾರೆ. ಶುಭಂನನ್ನು ಮೀರತ್‌ನ ಶಾಹ್‌ಪುರದಿಂದ ಬಂಧಿಸಲಾಗಿದೆ.
ಮಂಗಳವಾರ ಬಾಲಕಿಯು ತನ್ನ ತಂದೆಗೆ ಈ ದುರಂತವನ್ನು ತಿಳಿಸಿದ ಬಳಿಕ, ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 70(2) (ಸಾಮೂಹಿಕ ಅತ್ಯಾಚಾರ), 351(3) (ಕ್ರಿಮಿನಲ್ ಬೆದರಿಕೆ), 3(5) (ಸಾಮಾನ್ಯ ಉದ್ದೇಶಕ್ಕಾಗಿ ಅಪರಾಧ), ಮತ್ತು POCSO ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅನಾಮಿಕಾ ಶರ್ಮಾ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿಬಂದ ಕೂಡಲೇ ಬಿಜೆಪಿಯು ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿದೆ. ಆದರೆ ಆಗಸ್ಟ್ 2024 ರಿಂದ ಆಕೆ ಯಾವುದೆ ಪಕ್ಷದ ಹುದ್ದೆಯಲ್ಲಿಲ್ಲ ಎಂದು ಹರಿದ್ವಾರದ ಬಿಜೆಪಿ ಮೂಲಗಳು ತಿಳಿಸಿವೆ. ಅನಾಮಿಕಾ ಶರ್ಮಾ ತನ್ನ ಪತಿಯಿಂದ ಬೇರ್ಪಟ್ಟು, ಪ್ರಿಯಕರನ ಜೊತೆಗೆ ಅವನ ಹೋಟೆಲ್‌ನಲ್ಲಿ ವಾಸಿಸುತ್ತಿದ್ದರು. ಬಾಲಕಿಯು ತನ್ನ ತಂದೆಯ ಆರೈಕೆಯಲ್ಲಿದ್ದಳು.