ಕನ್ನಡಕ್ಕೆ ಮಾಸ್ತಿಯವರು ಅಮೂಲ್ಯ ಆಸ್ತಿ: ಡಾ.ವಾಸುದೇವೆ ಸೇಡಂ

ಜಿಲ್ಲೆ

ಕಲಬುರಗಿ: ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಕನ್ನಡದ ಅಮೂಲ್ಯವಾದ ಆಸ್ತಿಯಾಗಿದ್ದಾರೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ, ಸಾಹಿತಿ ಡಾ.ವಾಸುದೇವೆ ಸೇಡಂ ಎಚ್. ಹೇಳಿದರು.

ನಗರದ ಹೊಸ ಜೇವರ್ಗಿ ರಸ್ತೆಯ ಗೆಟ್ಸ್ ಡಿಗ್ರಿ ಕಾಲೇಜ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್’ರ 134ನೇ ಜನ್ಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ವಿಶ್ವದ ಪ್ರಮುಖ ಭಾಷೆಗಳಲ್ಲಿ ಸ್ಥಾನ ಪಡೆಯುವಲ್ಲಿ ಶ್ರಮಿಸಿದ, ಕನ್ನಡ ಭಾಷೆಯ ಸಾಹಿತ್ಯ, ಕಲೆ, ಸಂಸ್ಕೃತಿಗೆ ತಮ್ಮದೆಯಾದ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಮಾತನಾಡಿ, ಮಾಸ್ತಿಯವರ ‘ಕೆಲವು ಸಣ್ಣ ಕಥೆಗಳು’ ಎಂಬ ಪ್ರಥಮ ಕೃತಿಯು 1920ರಲ್ಲಿ ಪ್ರಕಟವಾಯಿತು. ಇದು ಆಧುನಿಕ ಕನ್ನಡದ ಸಾಹಿತ್ಯದ ವಿಶಿಷ್ಟವಾದ ಮೊದಲ ಕೃತಿಯೆನಿಸಿದೆ. ಹಾಗೆ ನೋಡಿದರೆ ಸಣ್ಣ ಕಥೆಯನ್ನು ಮೊದಲು ಬರೆದವರು ಮಾಸ್ತಿಯವರಲ್ಲದೇ ಇದ್ದರೂ ಕೂಡಾ, ಕಥೆಗಳಿಗೆ ಮತ್ತು ಮಾಸ್ತಿಯವರಿಗೆ ಅನೋನ್ಯವಾದ ಬಾಂಧವ್ಯವಿದೆ. ಆದ್ದರಿಂದಲೆ ಇವರು ಕನ್ನಡ ಕಥಾ ಸಾಹಿತ್ಯದ ಪ್ರಮುಖರೆನಿಸಿಕೊಂಡು, ‘ಕನ್ನಡದ ಆಸ್ತಿ’ಯಾಗಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಮಾಸ್ತಿಯವರ ಸಣ್ಣ ಕಥೆಗಳ ಭಾಷೆ, ನಿರೂಪಣಾ ಶೈಲಿ, ಜೀವನದ ನಿಶ್ಚಳ ಅನುಭವಗಳ ತುಂಬಾ ಸರಳವಾಗಿದ್ದು, ಎಂತಹ ಓದುಗರನ್ನು ತನ್ನೊಳಗೆ ಆವರಿಸಿಕೊಳ್ಳುವಂತೆ ಮಾಸ್ತಿಯವರ ಸಾಹಿತ್ಯ ಹೊಂದಿದೆ ಎಂದರು.

ಮಾಸ್ತಿಯವರ ಕುರಿತು ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು. ಅವರು ಅದಕ್ಕಿಂತಲೂ ದೊಡ್ಡವರೆಂಬ ನನ್ನ ಭಾವನೆ’ ಎಂದಿರುವ ಮಾತು ಮಾಸ್ತಿಯವರ ಮೇರು ವ್ಯಕ್ತಿತ್ವವನ್ನು ತೋರಿಸುತ್ತದೆ. ಕನ್ನಡ ಸಾಹಿತ್ಯ, ಭಾಷೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ನೀಡಿರುವ ಕೊಡುಗೆ ಬಹು ಮೌಲ್ಯಯುತವಾಗಿದೆ. ಅವರೊಬ್ಬ ಕನ್ನಡ ಸಾರಸತ್ವ ಲೋಕದ ಮೇರು ಸಾಹಿತಿಯಾಗಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಬಿ ಕಂಟೆಗೋಳ್, ಉಪನ್ಯಾಸಕ ಶಿವಲಿಂಗಪ್ಪ ತಳವಾರ, ಸಿಬ್ಬಂದಿ ಭರತ ಮಾಗೋಂಡ್, ಪ್ರಮುಖರಾದ ಜಯತೀರ್ಥ ರಾಯಚೂರ್, ಅಮಿತ್ ಶಹಾಪುರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *