ಉತ್ತರಪ್ರದೇಶ: ವಯಸ್ಸು 45 ಆಯಿತು. ಮದುವೆಯಾಗಲು ಇನ್ನೂ ಒಂದು ಹೆಣ್ಣು ಸಿಗಲಿಲ್ಲ ಎಂದು ಬೇಸರಗೊಂಡಿದ್ದ ವ್ಯಕ್ತಿ, ಹೆಣ್ಣಿನಿಂದಲೇ ಮೋಸ ಹೋಗಿ ಹತ್ಯೆಯಾದ ದುರ್ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ವಧು ಸಿಗುತ್ತಿಲ್ಲ ಎಂದು ತೀರ ಹತಾಶೆಗೊಂಡಿದ್ದ ವ್ಯಕ್ತಿ, ಫೇಸ್ಬುಕ್ ವಿಡಿಯೋದಲ್ಲಿ, ತನಗೆ ಯಾರೊಬ್ಬರು ಹೆಣ್ಣು ಕೊಡುತ್ತಿಲ್ಲ. ನನ್ನ ಹೆಸರಿನಲ್ಲಿ 18 ಎಕರೆ ಜಮೀನಿದೆ. ಆದರೆ ಅದನ್ನು ನೋಡಿಕೊಳ್ಳಲು ಯಾರು ಇಲ್ಲದಂತಾಗಿದೆ ನನ್ನ ಜೀವನ ಎಂದು ಗುರುಗಳ ಬಳಿ ಅಳಲು ತೋಡಿಕೊಂಡಿದ್ದ. ಇದುವೆ ಆತನ ಪಾಲಿಗೆ ಮುಳ್ಳಾಯಿತು. ಯಾವ ಹೆಣ್ಣು ಸಿಗಲಿಲ್ಲ ಎಂದು ಆತ ಪರದಾಡಿ, ಗೋಳಾಡುತ ಕಣ್ಣೀರಿಟ್ಟನೋ, ಅದೆ ಹೆಣ್ಣನಿಂದಲೇ ಆತನ ಜೀವ ಇಂದು ಮಣ್ಣಾಗಿರುವುದು ಸದ್ಯ ಹಲವರನ್ನು ಬೆಚ್ಚಿ ಬೀಳಿಸಿದೆ.
ಮೃತನನ್ನು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಪಾಡ್ವಾರ್ (ಖಿಟೋಲಾ) ಗ್ರಾಮದ ಇಂದ್ರಕುಮಾರ್ ತಿವಾರಿ ಎಂದು ಗುರುತಿಸಲಾಗಿದೆ. ಶಿಕ್ಷಕನಾಗಿ ಮತ್ತು ರೈತನಾಗಿಯೂ ಕೆಲಸ ಮಾಡಿಕೊಂಡಿದ್ದ ತಿವಾರಿ, ತನಗೆ 18 ಎಕರೆ ಭೂಮಿಯಿದೆ. ಆದರೆ ಆಸ್ತಿ ನೋಡಿಕೊಳ್ಳಲು ಯಾರು ಇಲ್ಲ ಎಂದು ವಿಡಿಯೋ ಮೂಲಕ ಕಳವಳ ವ್ಯಕ್ತಪಡಿಸಿದ್ದ. ಇದನ್ನು ಗಮನಿಸಿದ ಕಿರಾತಕಿ ಕುಶಿ ತಿವಾರಿ ಅಲಿಯಾಸ್ ಸಾಹಿಬಾ ಬಾನೋ, ವ್ಯಕ್ತಿಯ ಆಸ್ತಿಗಾಗಿ ಮದುವೆ ನೆಪವೊಡ್ಡಿ ಕೊಂದಿರುವುದು ಇದೀಗ ತನಿಖೆಯಲ್ಲಿ ಬಯಲಾಗಿದೆ.
ಫೇಸ್ಬುಕ್ ಮೂಲಕ ಇಂದ್ರಕುಮಾರ್ನನ್ನು ಸಂಪರ್ಕಿಸಿದ ವಂಚಕಿ, ನಾನು ನಿಮ್ಮನ್ನು ಮದುವೆಯಾಗಲು ಬಯಸಿರುವೆ. ನಮ್ಮ ಊರಿಗೆ ಬನ್ನಿ, ಇಲ್ಲೆ ತಾಳಿ ಕಟ್ಟಿಸಿಕೊಳ್ಳುತ್ತೆನೆ ಎಂದಿದ್ದಳು. ಹೆಣ್ಣು ಸಿಗ್ತಿಲ್ಲ ಎಂದವನಿಗೆ ಸಂತಸ, ಆಕೆಯ ಮೋಸದ ಜಾಲಕ್ಕೆ ಸುಲಭವಾಗಿ ಬಿದ್ದಿದ್ದ. ಮನೆಯವರಿಗೆ ಕುಶಿಯನ್ನು ಮದುವೆ ಮಾಡಿಕೊಂಡು ಬರುವುದಾಗಿ ಹೇಳಿದ್ದ ಇಂದ್ರಕುಮಾರ್, ಕುಶಿ ನಗರದಲ್ಲಿ ಕುಶಿಯನ್ನು ಮದುವೆಯಾದ. ಆದರೆ ಮೊದಲೇ ಸಂಚು ಹೂಡಿ ಸಹಚರರೊಂದಿಗೆ ಅಲ್ಲಿಗೆ ಬಂದಿದ್ದ ಆಕೆ, ತಿವಾರಿ ಬಳಿಯಿದ್ದ ಚಿನ್ನದ ಸರ ಮತ್ತು ಹಣವನ್ನು ಕದ್ದು, ಚಾಕುವಿನಿಂದ ಇರಿದು ಪರಾರಿಯಾಗಿದ್ದಳು.
ನಾಪತ್ತೆ ಕೇಸ್ನಡಿ ಇಂದ್ರಕುಮಾರ್ನನ್ನು ಹುಡುಕುತ್ತಿದ್ದ ಪೊಲೀಸರಿಗೆ ಜೂನ್ 6 ರಂದು ಉತ್ತರ ಪ್ರದೇಶದ ಕುಶಿ ನಗರದ ರಾಷ್ಟ್ರೀಯ ಹೆದ್ದಾರಿ 28ರ ಪೊದೆಗಳ ಬಳಿ ಇಂದ್ರಕುಮಾರ್ ಶವ ಸಿಕ್ಕಿತು. ಈ ವೇಳೆ ಆತನ ಕುತ್ತಿಗೆಯಲ್ಲಿ ಚಾಕು ಇರುವುದು ಪತ್ತೆಯಾಯಿತು. ಅದನ್ನು ವಶಪಡಿಸಿಕೊಳ್ಳಲಾಯಿತು. ಆರೋಪಿಗಳಿಗಾಗಿ ಹಲವು ದಿನಗಳಿಂದ ಹುಡುಕಾಟ ನಡೆಸಿದ ಖಾಕಿಗೆ ಕಡೆಗೂ ಖುಷಿ ಸಿಕ್ಕಿಬಿದ್ದಳು ಆದರೆ ಆಕೆಯ ಗ್ಯಾಂಗ್ ಮಾತ್ರ ಇನ್ನೂ ತಲೆಮರೆಸಿಕೊಂಡಿದೆ.
ಸದ್ಯ ಆರೋಪಿ ಸಾಹಿಬಾಳನ್ನು ಬಂಧಿಸಲಾಗಿದೆ, ಅವಳ ಬಳಿಯಿದ್ದ ನಕಲಿ ಆಧಾರ್ ಕಾರ್ಡ್ ಅನ್ನು ಖಾಕಿ ವಶಪಡಿಸಿಕೊಂಡಿದೆ. ಉಳಿದ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ಮುಂದುವರೆದಿದೆ. ಇನ್ನಷ್ಟು ಮಾಹಿತಿ ಕಲೆಹಾಕಲು ಸುದೀರ್ಘ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಹೇಳಿದ್ದಾರೆ,(ಏಜೆನ್ಸೀಸ್).