ಗುಜರಾತ್: ಕಚ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆಕೆಯ ಲಿವ್ ಇನ್ ಸಂಗಾತಿ ಹಾಗೂ ಸಿಆರ್ಪಿಎಫ್ ಕಾನ್ಸ್ಟೆಬಲ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಮೃತಳನ್ನು ಅರುಣಾಬೆನ್ ನಾಥುಭಾಯ್ ಜಾದವ್ (25) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ದಿಲೀಪ್ ಡಾಂಗ್ಚಿಯಾ, ಅರುಣಾಬೆನ್ರನ್ನು ಕೊಂದು, ಆಕೆಯನ್ನು ನಿಯೋಜಿಸಲಾಗಿದ್ದ ಅಂಜರ್ ಪೊಲೀಸ್ ಠಾಣೆಗೆ ಶನಿವಾರ ಬೆಳಗ್ಗೆ ತೆರಳಿ ತನ್ನ ಅಪರಾಧವನ್ನು ದಿಲೀಪ್ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಅರುಣಾಬೆನ್ ಅವರು ಕಚ್‌ನ ಅಂಜರ್ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ASI) ಆಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ರಾತ್ರಿ ಅರುಣಾಬೆನ್ ಮತ್ತು ಆಕೆಯ ಲಿವ್ ಇನ್ ಸಂಗಾತಿ ದಿಲೀಪ್, ಅಂಜಾರ್‌ನಲ್ಲಿರುವ ತಮ್ಮ ಮನೆಯಲ್ಲಿ ಜಗಳವಾಡಿದ್ದಾರೆ. ಈ ವೇಳೆ ಆಕೆ ತನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿಳು ಎಂದು ಆರೋಪಿ ದಿಲೀಪ್ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ಜಗಳ ತಾರಕ್ಕೇರಿದಾಗ ತಾಳ್ಮೆ ಕಳೆದುಕೊಂಡ ದಿಲೀಪ್, ಕೋಪದಿಂದಲೇ ಅರುಣಾಬೆನ್ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆಂದು ಅಂಜರ್ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಮುಖೇಶ್ ಚೌಧರಿ ಹೇಳಿದ್ದಾರೆ.
ಆರೋಪಿ ದಿಲೀಪ್ ಮಣಿಪುರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯಲ್ಲಿ ಸೇವೆ ಸಲ್ಲಿಸುತ್ತಿದ್ದ. ದಿಲೀಪ್ ಮತ್ತು ಅರುಣಾಬೆನ್ 2021 ರಿಂದ ಇನ್ಸ್ಟಾಗ್ರಾಂ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು. ಇಬ್ಬರೂ ದೀರ್ಘಕಾಲದ ಸಂಬಂಧ ಹೊಂದಿದ್ದರು ಮತ್ತು ಒಟ್ಟಿಗೆ ವಾಸಿಸುತ್ತಿದ್ದರು. ಅಲ್ಲದೆ ಮದುವೆಯಾಗುವ ಯೋಚನೆ ಕೂಡ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಅಂಜರ್ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)