ಕಲಬುರಗಿ: ದೇಶ ಕಂಡ ಶ್ರೇಷ್ಠ ಶಿಕ್ಷಣ ತಜ್ಞರಲ್ಲಿ ಒಬ್ಬರಾದ ಡಾ.ಎಚ್ ನರಸಿಂಹಯ್ಯನವರು ಬಹುಮುಖ ವ್ಯಕ್ತಿತ್ವದ ಸಮಾಜ ಸುಧಾರಕರಾಗಿ ಜನಮಾನಸದಲ್ಲಿ ಅಚಳಿಯದೇ ಉಳಿದಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ಸಮೀಪದ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಬೆಳಿಗ್ಗೆ ಏರ್ಪಡಿಸಿದ್ದ ‘ಡಾ.ಎಚ್.ನರಸಿಂಹಯ್ಯನವರ 105ನೇ ಜನ್ಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ರಾಷ್ಟ್ರದ ಅಭಿವೃದ್ಧಿಯ ಜೀವಾಳವಾದ ಶಿಕ್ಷಣ ಕ್ಷೇತ್ರ, ದೇಶದ ಸ್ವಾತಂತ್ರ ಹೋರಾಟಕ್ಕೆ, ವೈಚಾರಿಕತೆ, ವೈಜ್ಞಾನಿಕ ಕ್ಷೇತ್ರ, ಕಲೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳು ಮಾಡಿದ್ದಾರೆ ಎಂದರು.
ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ ವ್ಯಕ್ತಿ, ರಾಷ್ಟ್ರದ ಪ್ರಗತಿಕೆ ಮಾರಕವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿಯೂ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಇವರು ಸಾಕಷ್ಟು ಶ್ರಮಿಸಿದ್ದಾರೆ. ಪ್ರತಿಯೊಬ್ಬರು ಪ್ರಶ್ನಿಸದೆ ಯಾವುದೆ ವಿಷಯ ಒಪ್ಪಿಕೊಳ್ಳಬಾರದೆಂಬ ಅವರು ಅಚಲ ನಿಲವು ಶ್ಲಾಘನೀಯ. ದೇಶದ ಸ್ವಾತಂತ್ರ ಹೋರಾಟಕ್ಕಾಗಿ ಸೆರೆಮನೆ ವನವಾಸ ಅನುಭವಿಸಿದ್ದಾರೆ. ಯಾವುದೆ ರೀತಿಯ ವೈಯಕ್ತಿಕ ಹಿತಾಸಕ್ತಿಯ ಬದಲಾಗಿ, ರಾಷ್ಟ್ರದ ಹಿತಾಸಕ್ತಿ ಪ್ರಮುಖವೆಂದು ದುಡಿದಿದ್ದಾರೆ. ಭೌತಶಾಸ್ತ್ರರಾಗಿ, ಶ್ರೇಷ್ಠ ಶಿಕ್ಷಣ ತಜ್ಷರಾಗಿ, ಕಲೆ, ಸಾಹಿತ್ಯ, ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳ ರಕ್ಷಕರಾಗಿ ಹೀಗೆ ಹತ್ತು ಹಲವು ಪ್ರಕಾರದಲ್ಲಿ ದೇಶ ಮರೆಯದ ಕಾರ್ಯ ಮಾಡಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಅತ್ಯಂತ ಸರಳ ಜೀವನ ಸಾಗಿಸುತ್ತಿದ್ದ ಡಾ.ಎಚ್ಚೆನ್ ಅವರು, ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ಮಹಾನ ಸಾಧಕ ವ್ಯಕ್ತಿಯ ಜೀವನ, ಸಾಧನೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವ ಬಳಗದ ಕಾರ್ಯ ತುಂಬಾ ಶ್ಲಾಘನೀಯವಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಓಂಕಾರ ವಠಾರ, ಶಿಕ್ಷಕಿಯರಾದ ಪೂಜಾ ಹೂಗಾರ, ನೇಹಾ, ಮುಸ್ಕಾನ್ ಶೇಖ್, ಕಾವೇರಿ ಹೌದೆ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.