ಒಂದೆ ಬಾರಿಗೆ 20 ಜನ ಎಸ್ಪಿಗಳಿಗೆ ಮುಂಬಡ್ತಿ, 20 ಡಿಐಜಿ ಕೇಡರ್ ಹುದ್ದೆ, 1 ಡಿಜಿಪಿ ಹುದ್ದೆ ಸೃಷ್ಟಿ

ರಾಜ್ಯ

ಬೆಂಗಳೂರು: ರಾಜ್ಯ ಪೊಲೀಸ್ ವ್ಯವಸ್ಥೆಗೆ ಮೇಜರ್ ಸರ್ಜರಿ ನಡೆಸಲು ಸದ್ದಿಲ್ಲದೆ ಸಿದ್ಧತೆ ನಡೆದಿದೆ. ಹೊಸದಾಗಿ 20 ಉಪ ಮಹಾನಿರೀಕ್ಷಕ (ಡಿಐಜಿ) ಕೇಡರ್ ಹುದ್ದೆಗಳು ಹಾಗೂ ಒಂದು ಡಿಜಿಪಿ ಹುದ್ದೆ ಸೃಷ್ಟಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪೊಲೀಸ್‌ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಈ ಮನವಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸಕಾರಾತ್ಮಕವಾಗಿ ಸ್ಪಂದಿಸಿದರೆ ಮೊದಲ ಬಾರಿಗೆ ಒಂದೆ ಹಂತದಲ್ಲಿ 20 ಎಸ್ಪಿಗಳಿಗೆ ಡಿಐಜಿ ಸ್ಥಾನಕ್ಕೆ ಮುಂಬಡ್ತಿ ಪಡೆಯುವ ಭಾಗ್ಯ ಸಿಗಲಿದೆ. ಅದೆ ರೀತಿ ಡಿಜಿ-ಐಜಿಪಿ ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಐದು ಡಿಜಿಪಿ ಹುದ್ದೆಗಳ ಸಂಖ್ಯೆ ಆರಕ್ಕೆರಲಿದೆ.

ಅಲ್ಲದೆ ಸೇವಾ ಹಿರಿತನ ಆಧಾರದ ಮೇರೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅವರಿಗೆ ಡಿಜಿಪಿ ಪದೋನ್ನತಿ ಕಾಣುವ ಕಾಲ ಕೂಡಿ ಬಂದಿದೆ. ಈ ಪ್ರಸ್ತಾವನೆ ಸಂಬಂಧ ರಾಜ್ಯ ಸರ್ಕಾರ ಮಟ್ಟದ ಸಮಾಲೋಚನೆ ನಡೆದು ಕೇಂದ್ರಕ್ಕೆ ವರದಿ ಕಳುಹಿಸಲಾಗಿದ್ದು, ಕೆಲವೆ ದಿನಗಳಲ್ಲಿ ಕೇಂದ್ರದಿಂದ ಸಮ್ಮತಿ ಸಿಗುವ ನಿರೀಕ್ಷೆ ಇದೆ. ಇದಾದ ನಂತರ 2026ರ ಜನವರಿಯಲ್ಲಿ ಮುಂಬಡ್ತಿ ಸಂದರ್ಭದಲ್ಲಿ ಡಿಐಜಿ ಹುದ್ದೆಗಳ ಪದೋನ್ನತಿ ಆಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮುಂಬಡ್ತಿ ಯಾಕೆ ?
ಪ್ರಸ್ತುತ ರಾಜ್ಯದಲ್ಲಿ ಒಟ್ಟು 224 ಐಪಿಎಸ್ ಅಧಿಕಾರಿಗಳ ಪೈಕಿ ಎಸ್ಪಿ ದರ್ಜೆ ಅಧಿಕಾರಿಗಳ ಸಂಖ್ಯೆ ಹೆಚ್ಚಿದೆ. 2012ರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಐಪಿಎಸ್ ಹುದ್ದೆಗೆ ಕೆಪಿಎಸ್‌ಸಿ ಕೇಡರ್‌ ಅಧಿಕಾರಿಗಳಿಗೆ ಮುಂಬಡ್ತಿ ಸಿಕ್ಕಿತು. ಹೀಗಾಗಿ ಅಧಿಕವಾಗಿರುವ ಎಸ್ಪಿ ದರ್ಜೆ ಹುದ್ದೆಗಳನ್ನು ಕಡಿಮೆ ಮಾಡಿ ಆ ಹುದ್ದೆಗಳನ್ನು ಡಿಐಜಿ ಕೇಡರ್ ಹುದ್ದೆಗಳಿಗೆ ಮೇಲ್ದರ್ಜೆಗೇರಿಸಲಾಗುತ್ತದೆ. ಬಳಿಕ ಎಸ್ಪಿಗಳಿಗೆ ಮುಂಬಡ್ತಿ ನೀಡಲು ಪೊಲೀಸ್ ಇಲಾಖೆ ಯೋಜನೆಯಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸೇವಾ ಹಿರಿತನ ಮೇರೆಗೆ ಡಿಸಿಪಿಗಳಾದ ಡಿ.ದೇವರಾಜ್‌, ಎಸ್‌.ಗಿರೀಶ್‌, ಡಿ.ಆರ್‌ ಸಿರಿಗೌರಿ, ಎಐಜಿಪಿಗಳಾದ ಸಂಜೀವ್ ಪಾಟೀಲ, ಕಲಾ ಕೃಷ್ಣಸ್ವಾಮಿ, ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್‌, ಗುಪ್ತದಳದ ಎಸ್ಪಿ ಪರಶುರಾಮ್‌, ಬಿಎಂಟಿಸಿ ವಿಚಕ್ಷಣಾ ದಳದ ಎಸ್ಪಿ ಅಬ್ದುಲ್ ಅಹದ್‌, ಡಿಸಿಆರ್‌ಇ ಎಸ್ಪಿ ಡಾ.ಕೆ ಧರಣಿದೇವಿ, ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ.ಸಿ.ಕೆ ಬಾಬಾ, ಕೆಜಿಎಫ್‌ ಎಸ್ಪಿ ಶಾಂತರಾಜು ಹಾಗೂ ಕೇಂದ್ರ ಸೇವೆಯಲ್ಲಿರುವ ಧಮೇಂದ್ರ ಕುಮಾರ್‌ ಮೀನಾ ಸೇರಿ 20 ಅಧಿಕಾರಿಗಳಿಗೆ ಮುಂಬಡ್ತಿ ಸಿಗಲಿದೆ ಎನ್ನಲಾಗಿದೆ.

ನಾನ್‌ ಎಕ್ಸಿಕ್ಯುಟಿವ್ ಹುದ್ದೆಗಳು ಮೇಲ್ದರ್ಜೆಗೆ
ರಾಜ್ಯ ಪೊಲೀಸ್ ಕೇಂದ್ರ ಕಚೇರಿಯ ಎಸ್‌ಸಿಆರ್‌ಬಿ, ಎಐಜಿಪಿ ಹಾಗೂ ಕಾರಾಗೃಹ ಇಲಾಖೆಯ ಎಸ್ಪಿ ಸೇರಿ ನಾನ್‌ ಎಕ್ಸಿಕ್ಯುಟಿವ್ ಎಸ್ಪಿ ಹುದ್ದೆಗಳನ್ನು ಡಿಐಜಿ ಹುದ್ದೆಗೆ ಮೇಲ್ದರ್ಜೆಗೇರಿಸಲು ಇಲಾಖೆ ಪ್ರಸ್ತಾಪಿಸಿದೆ. ಆಗ ಮುಂಬಡ್ತಿ ನೀಡಿಕೆಯಲ್ಲಿ ಹೆಚ್ಚಿನ ತಕರಾರು ಬರುವುದಿಲ್ಲ ಎನ್ನಲಾಗಿದೆ.

ಡಿಜಿಪಿ ಹುದ್ದೆ ಸೃಷ್ಟಿ
ಸದ್ಯ ಡಿಜಿ-ಐಜಿಪಿ ಹುದ್ದೆಗೆ ಪೂರಕವಾಗಿ ಸಿಐಡಿ, ಸೈಬರ್‌, ಕಾರಾಗೃಹ ಇಲಾಖೆ, ಅಗ್ನಿಶಾಮಕ ದಳ ಹಾಗೂ ಪೊಲೀಸ್ ವಸತಿ ನಿಗಮ ಸೇರಿ ಐದು ಡಿಜಿಪಿ ಹುದ್ದೆಗಳಿವೆ. ಪೊಲೀಸ್ ಸಂಖ್ಯಾ ಬಲ ಆಧರಿಸಿ ಮತ್ತೊಂದು ಡಿಜಿಪಿ ಹುದ್ದೆ ಸೃಷ್ಟಿಗೆ ಇಲಾಖೆ ಪ್ರಸ್ತಾಪಿಸಿದೆ.

ಕೇಡರ್ ಪರಿಷ್ಕರಣೆ ಆಗಿಲ್ಲ 
ಐದು ವರ್ಷಕ್ಕೊಮ್ಮೆ ರಾಜ್ಯದ ಪೊಲೀಸ್ ಬಲ ಆಧರಿಸಿ ಕೇಡರ್ ಪರಿಷ್ಕರಣೆ ಆಗಬೇಕಿದೆ. ಆದರೆ ಹಲವು ವರ್ಷಗಳಿಂದ ಕೇಡರ್ ಬದಲಾವಣೆ ಮಾಡಿಲ್ಲ. ಹೀಗಾಗಿ ಈ ಬಾರಿ ಕೇಡರ್ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೆವೆ. ಈ ಕೋರಿಕೆಗೆ ಸರ್ಕಾರ ಕೂಡ ಪೂರಕವಾಗಿ ಸ್ಪಂದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *