ಗದಗ: ಕಾರಿನ ಬಾನೆಟ್ ಮೇಲೆ ಪಾಕಿಸ್ತಾನ ಧ್ವಜ ಪ್ರದರ್ಶಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಗದಗ ನಗರದ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಿಸಲಾಗಿದೆ.
ಈದ್ಮಿಲಾದ್ ಹಬ್ಬದಂದು ಅಪ್ರಾಪ್ತ ಬಾಲಕ ಇನ್ಸ್ಟಾಗ್ರಾಮ್ನಲ್ಲಿ ಕಾರಿನ ಬಾನೆಟ್ ಮೇಲೆ ಪಾಕಿಸ್ತಾನ ಧ್ವಜ ಹಾಕಿದ ಫೋಟೋ ಪೋಸ್ಟ್ ಮಾಡಿದ್ದು, ಸಮಾಜದ ಐಕ್ಯತೆಗೆ ಧಕ್ಕೆ ತರುವ ಹಾಗೂ ಸೌಹಾರ್ದತೆಗೆ ಭಾದಕವಾಗುವ ಕೃತ್ಯ ಎಸಗಿದ್ದಾನೆ ಎಂದು ಅಪ್ರಾಪ್ತ ಬಾಲಕನ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕ ಪೋಸ್ಟ್ ಮಾಡಿದ ಫೋಟೋ ಮತ್ತೊಮ್ಮೆ ಬೇರೊಬ್ಬ ವ್ಯಕ್ತಿಯ ಐಡಿಯಿಂದ ಶೇರ್ ಮಾಡಲಾಗಿತ್ತು. ಕಾರಿನ ಬಾನೆಟ್ ಮೇಲೆ ಪಾಕಿಸ್ತಾನದ ಧ್ವಜ ಮತ್ತು ನಂಬರ್ ಪ್ಲೇಟ್ಗೆ 5/9/25 ಎಂದು ಬರೆದು ಪಕ್ಕದಲ್ಲಿ ಪಾಕಿಸ್ತಾನ ಧ್ವಜದ ಚಿತ್ರ ಹಾಕಿ ಪೋಸ್ಟ್ ಮಾಡಿದ್ದನು.
ಪೊಲೀಸರು ಬಿಎನ್ಎಸ್ ಕಾಯ್ದೆಯಡಿ ಕಲಂ 299, 353(2), ಆರ್/ಡಬ್ಲೂ 3/5 ಪ್ರಕರಣ ದಾಖಲಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಇಂತಹ ಪೋಸ್ಟ್ ಹಾಕಿ ಪರಿಸ್ಥಿತಿ ಹದಗೆಡುವ ಮುನ್ನ ಆರೋಪಿಯನ್ನು ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.