ಕಲಬುರಗಿ: ರೈತರು ನಕಲಿ ಬೀಜಗಳಿಂದ ಮುನ್ನೆಚ್ಚರಿಕೆ ವಹಿಸಿ, ಬಿತ್ತನೆ ಮಾಡುವಾಗ ಜಾಗೃತಿ ವಹಿಸುವದು ಅಗತ್ಯ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನೀಡಿದರು.
ಆಳಂದ ತಾಲೂಕಿನ ತೆಲ್ಲೂರ ಗ್ರಾಮದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಮುಂಗಾರು ಕೃಷಿ ಜಾಗೃತಿ ಮತ್ತು ರೈತರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ನು ಕೆಲವೆ ದಿವಸಗಳಲ್ಲಿ ಮುಂಗಾರು ಮಳೆ ಆಗಮಿಸಲಿದೆ, ರೈತರು ಬಿತ್ತನೆ ಕಾರ್ಯ ಮಾಡಬೇಕಾಗುತ್ತದೆ. ಬಿತ್ತನೆ ಬೀಜಗಳನ್ನು ಖರೀದಿಸುವಾಗ ಲೇಬಲ್, ಅಗಮಾರ್ಕ ಗುರುತು, ತಯಾರಿಸಿದ ದಿನಾಂಕ, ಬಿತ್ತನೆ ಬೀಜಗಳ ಮುಕ್ತಾಯದ ಅವಧಿ, ನಿಜ ಬಿತ್ತನೆ ಬೀಜಗಳು, ಪ್ರಮಾಣಿತ ಬೀಜಗಳು, ಪೌಂಡೇಶನ್ ಬೀಜಗಳು ಇರುವುದನ್ನು ಧೃಢೀಕರಿಸಿಕೊಂಡು ಬೀಜಗಳನ್ನು ಖರೀದಿಸಬೇಕು ಎಂದರು.
ರೈತರು ಯಾವುದೆ ಒಂದು ಬೆಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸದೆ, ಬಹು ಬೆಳೆ ಪದ್ಧತಿಯನ್ನು ಅನುಸರಿಸಬೇಕು. ಪ್ರಗತಿಪರ ರೈತರು, ಕೃಷಿ ವಿಜ್ಞಾನಿಗಳ ಸಲಹೆಗಳನ್ನು ಪಡೆದು, ವೈಜ್ಞಾನಿಕ ಬೇಸಾಯ ಮಾಡಬೇಕು. ಹಸಿರು ಎಲೆ ಗೊಬ್ಬರ ತುಂಬಾ ಫಲವತ್ತಾಗಿದೆ, ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಡಿಎಪಿ ಮತ್ತು ಯೂರಿಯಾ ಗೊಬ್ಬರಗಳನ್ನು ಮಾತ್ರ ಬಳಸದೆ, ಇತರೆ ಕಾಂಪೆಕ್ಸ್ ಗೊಬ್ಬರ ಬಳಸಬಹುದಾಗಿದೆ. ಗೊಬ್ಬರ ಮತ್ತು ಬೀಜ ಖರೀದಿಗಳ ರಸೀದಿ ಪಡೆದು, ಜೋಪಾನವಾಗಿ ಇಟ್ಟುಕೊಳ್ಳಬೇಕು. ಅನಧಿಕೃತ ಬೀಜ ಮತ್ತು ಗೊಬ್ಬರ ಖರೀದಸಬಾರದು ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಆಳಂದ ಪಿಎಲ್ಡಿ ಬ್ಯಾಂಕ್ನ ನಿರ್ದೇಶಕ ಪಂಡಿತ ಚೌಲ್, ಗ್ರಾ.ಪಂ ಸದಸ್ಯ ಹಾಜಿ ಮಲಂಗ್, ಶರಣಪ್ಪ ಖಜೂರಿ, ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್’ಡಿಎಂಸಿ ಅಧ್ಯಕ್ಷ ವೀರಣ್ಣ ಡಿ.ಚೌಲ್, ಮಲ್ಲಯ್ಯ ಮಠ, ಮಹಾಂತಪ್ಪ ಪಾಟೀಲ, ಕಲ್ಯಾಣಿ ಧೂಳ್, ಗುರಣ್ಣ ಚೌಲ್, ಬಸವರಾಜ ಖಜೂರಿ, ಶಿವರುದ್ರಪ್ಪ ಚೌಲ್, ವಿಠಲ್, ಮರ್ತುಜ್ ಅಲಿ, ಆರಣಬಸಪ್ಪ ಪಾಟೀಲ, ವಿಠಲ್ ಚೌಲ್, ಶ್ರೀಶೈಲ್ ಪಾಟೀಲ, ಶ್ರೀಶೈಲ್ ಮಠ ಎಸ್’ಡಿಎಂಸಿ ಅಧ್ಯಕ್ಷ ವೀರಣ್ಣ ಡಿ.ಚೌಲ್ ಸೇರದಿಂತೆ ಅನೇಕ ರೈತರು, ಗ್ರಾಮಸ್ಥರು ಇದ್ದರು.