ಕಲಬುರಗಿ: ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ, ಹಿಂದುಳಿದ, ಮಹಿಳೆಯರ, ಬಡವರ ಪರ ಹೋರಾಟ ಮಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಲು ಶ್ರಮಿಸಿದ, ಅನೇಕ ಕೆರೆ-ಕಟ್ಟೆಗಳನ್ನು ನಿರ್ಮಿಸಿ ಸಮಾಜಪರ ಕೆಲಸಗಳನ್ನು ಮಾಡಿದ ಅಹಿಲ್ಯಾಬಾಯಿ ಹೋಳ್ಕರ ಅವರು ಬಹುಮುಖಿ ವ್ಯಕ್ತಿತ್ವದ ಮಹಾನ ಸಾಧಕಿಯಾಗಿ ಭಾರತೀಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ಅಹಿಲ್ಯಾಬಾಯಿ ಹೋಳ್ಕರ್‌ರ 300ನೇ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಭಾರತದ ಇತಿಹಾಸದಲ್ಲಿ ಹೋಳ್ಕರ ಅವರ ಹೆಸರು ಪ್ರಮುಖವಾಗಿದೆ. ಭಾರತದ ಸ್ವಾತಂತ್ರಕ್ಕಾಗಿ ಕೆಚ್ಚೆದೆಯಿಂದ ಹೋರಾಟ ಮಾಡುವ ಮೂಲಕ ಮಹಿಳಾ ಲೋಕಕ್ಕೆ ಮಾದರಿಯಾಗಿದ್ದಾರೆ. ಸದಾ ಸಮಾಜಪರ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇಂತಹ ಮಹಾನ ಸಾಧಕಿಯ ಪರಿಚಯಿಸುವ ಕಾರ್ಯ ಜರುಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಹಾಗೂ ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.