ಕಲಬುರಗಿ: ಭಾರತದಲ್ಲಿ ಸಹಕಾರಿ ಚಳುವಳಿ ಆರಂಭವಾಗಿ ಶತಮಾನ ಕಳೆದರು ಕೂಡಾ ಅದರ ತತ್ವ, ಆಶಯ ಜನಸಾಮಾನ್ಯರಿಗೆ ಮುಟ್ಟುತ್ತಿಲ್ಲ. ‘ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ’ ಎಂಬ ಸಹಕಾರದ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅವುಗಳ ಸದುಪಯೋಗ ಪಡೆದುಕೊಂಡು ಸಹಕಾರಿ ಚಳುವಳಿಯ ಯಶಸ್ವಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ್ ಹೇಳಿದರು.
ಜಿಲ್ಲೆಯ ಶಹಾಬಾದ ತಾಲೂಕಿನ ಭಂಕೂರ್‌ನ ಕೆರಿಯಮ್ಮ ದೇವಸ್ಥಾನದ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಅಂತಾರಾಷ್ಟ್ರೀಯ ಸಹಕಾರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರದ ಜನಸಾಮಾನ್ಯರ ಆರ್ಥಿಕ ಜೀವನದ ಸುಗಮ ನಿರ್ವಹಣೆಗೆ ಸಹಾಯಕರವಾಗಿ ಸಹಕಾರಿ ಸಂಸ್ಥೆಗಳು ಸೇವೆ ಸಲ್ಲಿಸುತ್ತಿವೆ. ಜನರು ಸದಸ್ಯರಾಗುವುದು, ಸಂಘಗಳ ರಚನೆ, ಸ್ವಯಂ ಉದ್ಯೋಗ ಮಾಡುವ ಮೂಲಕ ಸ್ವಂತ ಬೆಳವಣಿಗೆಗೆ ಜೊತೆಗೆ ಸಂಘ-ಸಂಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ಸರ್ಕಾರದ ವಿವಿಧ ಸಹಕಾರಿ ಯೋಜನೆಗಳನ್ನು ಬಳಸಿಕೊಳ್ಳುಬೇಕು. ‘ಸಹಕಾರ’ ಎಂಬ ಶಬ್ದವೇ ಬಹಳ ಅದ್ಭುತವಾದದ್ದು. ಎಲ್ಲೆಡೆ ಸಹಕಾರವಿರಬೇಕು. ‘ವಸ್ತು ವಿನಿಯಮ ಪದ್ಧತಿ’ಯಿಂದ ‘ಹಣ ವಿನಿಮಯ ಪದ್ಧತಿ’ಯೆಡೆಗೆ ಜನಸಾಮಾನ್ಯರನ್ನು ಸೆಳೆದು, ಆರ್ಥಿಕ ಜ್ಞಾನವನ್ನುಂಟು ಮಾಡುವಲ್ಲಿ ಸಹಕಾರ ಚಳುವಳಿ ಪಾತ್ರವಹಿಸಿದೆ. ಸಹಕಾರಿ ಸಂಸ್ಥೆಗಳ ಪಾತ್ರದ ಬಗ್ಗೆ ವ್ಯಾಪಕವಾದ ಜನಜಾಗೃತಿಯಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಳಂದನ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಡಾ.ರಾಜಶೇಖರ ಪಾಟೀಲ ಮಾತನಾಡಿ, ಸಹಕಾರಿ ತತ್ವವು ವೈಯಕ್ತಿಕ ಸ್ವಾರ್ಥತೆ ಬಿಟ್ಟು ಪರಸ್ಪರ ಬೆರೆಯುವುದುನ್ನು ಕಲಿಸುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಯಾಗಿದೆ. ಸ್ವಸಹಾಯ ಮತ್ತು ಪರಸ್ಪರ ಸಹಾಯದ ಗುಣವನ್ನು ಹೊಂದಿದೆ. ಸೇವೆಯೇ ಮುಖ್ಯ ಗುರಿಯಾಗಿದ್ದು, ಲಾಭ ಗಳಿಕೆ ಗೌಣವಾಗಿದೆ. ಅಗ್ಗದ ಸಾಲ ಸೌಲಭ್ಯ ದೊರೆಯುತ್ತದೆ. ಉಳಿತಾಯ ಹಾಗೂ ಹೂಡಿಕೆಗೆ ಉತ್ತೇಜನ ನೀಡುತ್ತದೆ. ಸಹಕಾರಿ ಸಂಘಗಳು ವಿಶೇಷವಾಗಿ ರೈತರಿಗೆ, ಜನಸಾಮಾನ್ಯರಿಗೆ ತುಂಬಾ ಪ್ರಯೋಜನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಸಿರಗೊಂಡ, ಉಪನ್ಯಾಸಕ ಶಶಿಕಾಂತ ಮಡಿವಾಳ, ಪ್ರಮುಖರಾದ ಚನ್ನಪ್ಪಗೌಡ ಘಟ್ಟದ್, ಅನಿಲ್ ಮೈನಾಳಕರ್, ರಾಜಶೇಖರ ಪಾಗದ್, ಮಹೇಂದ್ರ ರಾಜೋಳೆ, ಶಿಲ್ಪಾ ಗುಜ್ಜನ್ ಸೇರಿದಂತೆ ಅನೇಕರು ಇದ್ದರು.