ಕಲಬುರಗಿ: ತಂಬಾಕು, ಧೂಮಪಾನ ಸೇವನೆಯಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ದುಷ್ಪರಿಣಾಮವಾಗಿ ಜೀವಕ್ಕೆ ಗಂಡಾಂತರ, ಹೀಗಾಗಿ ಇವುಗಳ ಸೇವನೆ ಮಾಡಬಾರದು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಶನಿವಾರ ಜರುಗಿದ ‘ವಿಶ್ವ ತಂಬಾಕು ರಹಿತ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಯುವ ಶಕ್ತಿಯಿದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಸದೃಢ ಮಾನವ ಸಂಪನ್ಮೂಲ ತುಂಬಾ ಅಗತ್ಯವಾಗಿದೆ. ಅದರಲ್ಲಿಯೂ ಯುವಕರು ರಾಷ್ಟ್ರದ ಶಕ್ತಿಯಾಗಿದ್ದಾರೆ. ಆದರೆ ನಮ್ಮ ಯುವಕರು ವಿವಿಧ ಕಾರಣಗಳಿಂದ ಧೂಮಪಾನ ವ್ಯಸನಿಗಳಾಗಿ, ಅದಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ತಂಬಾಕು ಒಳಗೊಂಡ ಬೀಡಿ, ಸಿಗರೇಟ್ ಹಾಗೂ ಗುಟಕಾ ಸೇವನೆಯಿಂದ ಕ್ಯಾನ್ಸರ್ ರೋಗ ಉಂಟಾಗುತ್ತದೆ. ಜೊತೆಗೆ ಅನ್ನನಾಳಕ್ಕೆ ಆಸಿಡ್ ಸುರಿದು, ಹೊಟ್ಟೆ ನೋವು, ಗಂಟಲು ಕ್ಯಾನ್ಸರ್, ಪಾರ್ಕಿನಸನ್ ರೋಗ, ನಪುಂಸತತ್ವದAತಹ ರೋಗಗಳು ಉಂಟಾಗುತ್ತವೆ. ಗುಟಕಾ ಸೇವಿಸುವುದರಿಂದ ಬಾಯಿಯ ಲೋಳೆಪರೆಯು ಗಡುಸಾಗಿ, ಬಾಯಿಯ ಚಟುವಟಿಕೆಗಳಿಗೆ ಅಡ್ಡಿ ಉಂಟಾಗಿ, ಕೊನೆಗೆ ಅದರ ಚಟುವಟಿಕೆ ಸ್ಥಗಿತಗೊಳಿಸುತ್ತದೆ. ಇದರಲ್ಲಿರುವ ಮೆಂಥೋಲ್ ಅಂಶ ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅನ್ನ ನಾಳದಲ್ಲಿ ಹುಣ್ಣಾಗುವುದು, ಆಹಾರ ಸೇವಿಸಿದರೆ ವಾಂತಿಯಾಗುವುದು ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಎಂದು ತಂಬಾಕು, ಧೂಮಪಾನದಿಂದಾಗುವ ದುಷ್ಪರಿಣಾಮದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಗಂಗಾಜ್ಯೋತಿ ಗಂಜಿ, ಸಂಗಮ್ಮ ಅತನೂರ, ರೇಶ್ಮಾ ನಕ್ಕುಂದಿ, ಚಂದಮ್ಮ ಮರಾಠಾ, ಶ್ರೀದೇವಿ ಸಾಗರ, ಚಂದ್ರಕಲಾ ಮಠಪತಿ, ಲಕ್ಷ್ಮಿ ಮೈಲಾರಿ ಸೇರಿದಂತೆ ಅನೇಕರು ಇದ್ದರು.