ಕಲಬುರಗಿ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿ ಹಾಗೂ ರೈತರೇ ದೇಶದ ಬೆನ್ನೆಲುಬು. ನಮ್ಮ ದೇಶ ತಾಯಿಯ ಸ್ವರೂಪದಲ್ಲಿ ಕಾಣಲಾಗುತ್ತದೆ. ಮಹಿಳೆ ಗರ್ಭವತಿಯಾದಾಗ ಸೀಮಂತ ಮಾಡುವಂತೆ, ಭೂಮಿಯನ್ನು ತಾಯಿ, ದೇವರೆಂದು ನಂಬಿ ಕಾಯಕ ಮಾಡುವ ಶ್ರಮಜೀವಿಯಾದ ರೈತ, ತಾನು ಬೆಳೆದ ಫಸಲಿಗೆ ಪೂಜೆ, ಗೌರವ ಸಲ್ಲಿಸಿ ಸೀಮಂತದ ಕಾರ್ಯಕ್ರಮದಂತೆ ಪೂಜಿಸಿ, ಆರಾಧಿಸುವ ಪ್ರತೀಕ ಸೀಗೆ ಹುಣ್ಣಿಮೆಯಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ಸುಂಟನೂರ ಗ್ರಾಮದ ರಾಮಚಂದ್ರ ಬಬಲಾದಿಯವರ ತೊಗರಿ ಹೊಲದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಬೆಳಿಗ್ಗೆ ಜರುಗಿದ ‘ಸೀಗೆ ಹುಣ್ಣಿಮೆ’ಯ ಕಾರ್ಯಕ್ರಮದಲ್ಲಿ ತೊಗರಿ ಬೆಳೆಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸೀಗೆ ಹುಣ್ಣಿಮೆ ದಿನದಂದು ಬೆಳೆಯನ್ನು ಪೂಜಿಸಿ ಇಳುವರಿ ಹೆಚ್ಚಾಗಲಿ ಎಂಬ ಪ್ರಾರ್ಥನೆ ರೈತನದಾಗಿದೆ. ಪ್ರಸ್ತುತ ವರ್ಷ ನಮ್ಮ ಭಾಗದಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಬೆಳೆ ಹಾನಿಯಾಗಿದೆ. ಆದರೂ ಕೂಡಾ ಇಲ್ಲಿನ ತೊಗರಿ ಉತ್ತಮವಾಗಿದ್ದು, ಸಂತೋಷದಾಯಕವಾಗಿದೆ. ದೇಶಕ್ಕೆ ಆಹಾರ ನೀಡುವ ರೈತನ ಬದುಕು ಸಮೃದ್ಧವಾಗಲಿ, ಉತ್ತಮ ಫಸಲು, ಬೆಲೆ ದೊರೆಯಲಿ, ರೈತಪರ ನೀತಿ, ಕಾರ್ಯಕ್ರಮಗಳನ್ನು ರೂಪಿಸಿ, ಸೂಕ್ತ ರೈತರಿಗೆ ದೊರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆಗಳು ನೀಡಿದರು.
ರಾಮಚಂದ್ರ ಬಬಲಾದಿ, ಶಂಕರ ಹುಲಮನಿ, ದತ್ತು ಮರಾಠಾ, ನಾಗೇಂದ್ರ ನ್ಯಾಮನ್, ಸಮೀರ್ ಆಳಂದ, ಶಂಕರ ಕುಂಬಾರ ಸೇರಿದಂತೆ ಮತ್ತಿತರರಿದ್ದರು.