ಕಲಬುರಗಿ: ಮಹಿಳೆಯರು ತಮ್ಮ ಆರೋಗ್ಯದಲ್ಲಿ ಏನಾದರೂ ಸಮಸ್ಯೆಯಿದ್ದರೆ ಮುಜುಗರ ಪಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ, ಸಲಹೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಮಹಿಳೆಯರಿಗೆ ಸಲಹೆ ನೀಡಿದರು.
ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಅಂತಾರಾಷ್ಟ್ರೀಯ ಮಹಿಳಾ ಆರೋಗ್ಯ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೆ ಸಮಸ್ಯೆಯಿದ್ದರೆ, ಮುಜುಗರ, ಹಿಂಜರಿಕೆಯ ಮನೋಭಾವದಿಂದ ವೈದ್ಯರನ್ನು ಕಾಣದೆ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಇದು ಮುಂದೆ ಅವರಿಗೆ ದೊಡ್ಡ ಸಮಸ್ಯೆಯಾಗುತ್ತದೆ ಎಂದರು.
ಮಹಿಳೆಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮಾಸಿಕ ಋತುಸ್ರಾವದ ಸಮಸ್ಯೆಯಿರುವವರು, ಅದರಲ್ಲಿಯೂ ಬಿಳಿ ಸೆರಗಿನ ತೊಂದರೆಯಿಂದ ಬಳಲುತ್ತಿರುವವರು, ಆರಂಭದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮುಂದೆ ಕ್ಯಾನ್ಸರ್ ಆಗಿ ಪರಿವರ್ತನೆಯಾಗುತ್ತದೆ. ರಕ್ತಹೀನತೆ, ರಕ್ತಸ್ರಾವ, ಮೈಗ್ರೇನ್, ಅಶಕ್ತತೆ, ಜಂತುಹುಳದ ತೊಮದರೆ, ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಬೊಜ್ಜುತನ, ಹೈಪೋಥೈರಾಯಿಡಿಸಮ್, ಮಾನಸಿಕ ತೊಂದರೆಯಂತಹ ಕೆಲವು ಸಮಸ್ಯೆಗಳು ಮಹಿಳೆಯರಲ್ಲಿ ಹೆಚಾಗಿ ಕಂಡುಬರುತ್ತವೆ ಎಂದರು.
ನಿಯಮಿತವಾಗಿ ಆಹಾರ, ನಿದ್ರೆ, ಶುದ್ಧವಾದ ಕುಡಿಯುವ ನೀರಿನ ಸೇವನೆ, ವಿಶ್ರಾಂತಿ, ಯೋಗ, ಧ್ಯಾನ, ವ್ಯಾಯಾಮ ಮಾಡಬೇಕು. ಮಹಿಳೆಯರು ಹೆಚ್ಚಾಗಿ ಹಸಿರು ತರಕಾರಿ, ಹಣ್ಣುಗಳು, ಮೊಳಕೆ ಕಾಳುಗಳ ಸೇವನೆ ಮಾಡಬೇಕು. ನಿಯಮಿತವಾಗಿ ವಿಶ್ರಾಂತಿ ಪಡೆಯಬೇಕು. ಎಡಬದಿಯ ಮಗ್ಗಲಿಗೆ ಮಲಗುವುದು ಉತ್ತಮ. ವಿಶೇಷವಾಗಿ ಹದಿಹರಿಯದ ಹೆಣ್ಣುಮಕ್ಕಳು ತಮ್ಮ ಸಮಸ್ಯೆಗಳನ್ನು ಬಹಳ ಜಾಗರುಕತೆಯಿಂದ ಪರಿಹರಿಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡಿದರೆ, ಆಕೆಯು ಬೇಗನೆ ಗರ್ಭವತಿಯಾಗಿ ಹೆರಿಗೆಯ ಸಂದರ್ಭದಲ್ಲಿ ರಕ್ತಸ್ರಾವವಾಗಿ, ಹಿಮೋಗ್ಲೋಬಿನ್ ಕೊರತೆಯಿಂದ ತಾಯಿ ಮತ್ತು ಮಗು ಇಬ್ಬರಿಗೂ ತೊಂದರೆಯಾಗಿ, ಅಂತಿಮವಾಗಿ ಸಾವು ಕೂಡಾ ಸಂಭವಿಸುವ ಸಂದರ್ಭ ಬರುತ್ತದೆ. ಇದರ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ ಪಾಟೀಲ, ಆರೋಗ್ಯ ಸಂಪತ್ತು ದೊಡ್ಡದು. ಅದನ್ನು ಕಾಪಾಡಿಕೊಳ್ಳಬೇಕಾದದ್ದು ಅಗತ್ಯವಾಗಿದೆ. ಸದೃಢ ಮಾನವ ಸಂಪನ್ಮೂಲ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ತಾಯಿ ಸದೃಢವಾಗಿದ್ದರೆ ಮಾತ್ರ ಮಗು ಆರೋಗ್ಯಪೂರ್ಣವಾಗಿ ಜನಿಸಿ, ಆರೋಗ್ಯಯುತವಾದ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು. ನಿಯಮಿತವಾಗಿ ವೈದ್ಯರ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಬೇಕು ಎಂದರು.
ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಸಂಗಮ್ಮ ಅತನೂರ, ಚಂದಮ್ಮ ಮರಾಠಾ, ಶ್ರೀದೇವಿ ಸಾಗರ, ರೇಶ್ಮಾ ನಕ್ಕುಂದಿ ಅವರು ಬಡಾವಣೆಯ ಮಹಿಳೆಯರು ಮತ್ತು ಶಾಲೆಯ ವಿದ್ಯಾರ್ಥಿನಿಯರಿಗೆ ಆಪ್ತ ಸಮಾಲೋಚನೆಯ ಮೂಲಕ ಅನೇಕ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕಿಯರಾದ ಶಿಲ್ಪಾ ಖೇಡ್, ಪ್ರೀತಿ ಜಿಡಗೆ, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಗುಂಡಪ್ಪ ಶೇರಿಕಾರ, ಸುನಿತಾ, ಸಾವಿತ್ರಿ ಹರಸೂರ, ಪಾರ್ವತಿ ಶೇರಿಕಾರ, ರಂಜೀತಾ ಪೂಜಾರಿ ಹಾಗೂ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಬಡಾವಣೆಯ ಮಹಿಳೆಯರು ಪಾಲ್ಗೊಂಡಿದ್ದರು.