ಕಲಬುರಗಿ: ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ತರಗತಿಯ ಪಠ್ಯದ ಜೊತೆಗೆ ಪಠ್ಯೇತರ, ಸೃಜನಶೀಲ ಚಟುವಟಿಕೆಗಳ ಮೂಲಕ ವಿಷಯದ ಜ್ಞಾನ, ಸಮಯದ ಸದುಪಯೋಗಕ್ಕೆ ಬೇಸಿಗೆ ಶಿಬಿರಗಳು ಪೂರಕವಾಗುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಹೊರವಲಯದ ಉಪಳಾಂವ ಗ್ರಾಮದ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯಲ್ಲಿ ಜರುಗಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೇಸಿಗೆ ದಿನಗಳಲ್ಲಿ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಸುತ್ತಾಡಿ ಆರೋಗ್ಯ ಹಾಳುಮಾಡಿಕೊಳ್ಳುತ್ತಾರೆ. ಮಕ್ಕಳು ಮೊಬೈಲ್, ಟಿ.ವಿ ವೀಕ್ಷಣೆಯಲ್ಲಿಯೇ ಸಮಯ ವ್ಯರ್ಥಮಾಡುವುದು ಬೇಡ ಎಂದರು.
ಸಂಸ್ಥೆಯ ಅಧ್ಯಕ್ಷ ಗೌಡೇಶ್ ಬಿರಾದಾರ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು, ಅತ್ಯಂತ ಕಡಿಮೆ ಶುಲ್ಕದಲ್ಲಿ ಬೇಸಿಗೆ ದಿನಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 2 ತಿಂಗಳುಗಳ ಕಾಲ ಪಠ್ಯ ಮತ್ತು ಪಠ್ಯೇತರ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ತರಬೇತಿ ಶಿಬಿರ ಜರುಗಿದೆ. ಗ್ರಾಮದ ಹಾಗೂ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಇದರ ಪ್ರಯೋಜನೆ ಪಡೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಕಾರ್ಯದರ್ಶಿ ಓಂದೇವಿ ಜಿ.ಬಿರಾದಾರ, ಶಾಲೆಯ ಶಿಕ್ಷಕರಾದ ಜ್ಯೋತಿ ಪಾಟೀಲ, ಸಂಗೀತಾ ಪಿ.ಪಾಟೀಲ, ದೇವರಾಜ ಮಳ್ಳಿ, ಕೈಲಾಸ ಪಾಟೀಲ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.