ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ: ಇನ್ನುಮುಂದೆ ಕೋವಿಡ್ ಟೆಸ್ಟ್ ಕಡ್ಡಾಯ

ರಾಜ್ಯ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಉಸಿರಾಟ ಸಮಸ್ಯೆ ಮತ್ತು ಹೃದಯಸಂಬಂಧಿ ಕಾಯಿಲೆ ಇರುವವರಿಗೆ ಕಡ್ಡಾಯವಾಗಿ ಕೋವಿಡ್​ ಟೆಸ್ಟ್​ ಮಾಡುವಂತೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ದಿನೇಶ್​ ಗುಂಡೂರಾವ್​, ಒಂದು ತಿಂಗಳಿಗಾಗುವಷ್ಟು ಟೆಸ್ಟ್ ಕಿಟ್ ತೆಗೆದಿಡುವಂತೆ ಸೂಚನೆ ಎಲ್ಲಾ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು 35 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ.

ಉಸಿರಾಟ ಹಾಗೂ ಹೃದಯಸಂಬಂಧಿ ಕಾಯಿಲೆಯಿಂದ ದಾಖಲಾಗಿರುವ ರೋಗಿಗಳಿಂದ ಆಸ್ಪತ್ರೆ ಸಿಬ್ಬಂದಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಬೇಕು. ಜನಸಂದಣಿಯಲ್ಲಿ ಮಾಸ್ಕ್​ ಧರಿಸಿ. ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ. ಕೋವಿಡ್ ಬಂದಿದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ನು ಪಾಲಿಸಿ, ಮುಂಜಾಗ್ರತೆ ವಹಿಸಿದರೆ ಸಾಕು ಎಂದು ಸಲಹೆ ನೀಡಿದ್ದಾರೆ.

ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸಚಿವ ದಿನೇಶ್​ ಗುಂಡೂರಾವ್​ ಅವರಿಗೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಕೆಲ ಸಲಹೆಗಳು ನೀಡಿದ್ದಾರೆ. ಸಲಹಾ ಸಮಿತಿ ಸೂಚನೆ ಮೇರೆಗೆ ರವಿವಾರ (ಮೇ.25) ದಿಂದ ರಾಜ್ಯದ 8 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಮತ್ತೆ ಆರಂಭಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿಯೇ ಹೆಚ್ಚು ಕೋವಿಡ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.

9 ತಿಂಗಳ ಮಗುವಿಗೆ ಕೋವಿಡ್​

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಒಂಬತ್ತು ತಿಂಗಳ ಮಗುವಿಗೆ ಕೋವಿಡ್ -19 ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಇದನ್ನು ದೃಢಪಡಿಸಿದ್ದಾರೆ. ಶಿಶುವಿಗೆ ಸೋಂಕು ತಗುಲಿರುವುದು ಮೇ.22 ರಂದು ರಾಪಿಡ್ ಆಂಟಿಜೆನ್ ಪರೀಕ್ಷೆ (ಆರ್‌ಎಟಿ) ನಡೆಸಿದಾಗ ದೃಢಪಟ್ಟಿದೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಶುಕ್ರವಾರ ದೃಢಪಡಿಸಿದ್ದಾರೆ.

ಮಗುವನ್ನು ಆರಂಭದಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆಯಲಾಗಿತ್ತು. ನಂತರ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮಗುವಿನ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ, ಸೂಕ್ತ ವೈದ್ಯಕೀಯ ಆರೈಕೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *