ಕಲಬುರಗಿ: ಆಳಂದ ಸಾಸಿರ ನಾಡಿನ ವ್ಯಾಪ್ತಿಗೆ ಒಳಪಟ್ಟ ನಿಂಬರ್ಗಾ ಗ್ರಾಮವು ನಾಡಿನ ಪ್ರಾಚೀನ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಕೇಂದ್ರವಾಗಿತ್ತು. ಇಲ್ಲಿ ಉತ್ಪಾದಿಸಿದ ಎಲೆ, ಅಡಕೆ, ದಾಲ್ಚಿನ್ನಿ, ಸಾಂಬಾರು ಪದಾರ್ಥ, ತೋಟಗಾರಿಕೆ ಬೆಳೆಗಳು, ಖರ್ಜೂರ, ಹೂವುಗಳು ನಾಡಿನ ವಿವಿಧ ಭಾಗಗಳಿಗೆ ರಫ್ತಾಗುತ್ತಿದ್ದವು ಎಂದು ಸಂಶೋಧಕ-ಸಾಹಿತಿ ಮುಡುಬಿ ಗುಂಡೆರಾವ ಅಭಿಮತ ವ್ಯಕ್ತಪಡಿಸಿದರು.
ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಮಹಾದೇವ ದೇವಾಲಯದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯಾತ್ಮಕ ಸರಣಿ ಕಾರ್ಯಕ್ರಮ-18ರಲ್ಲಿ ಶುಕ್ರವಾರ ಜರುಗಿದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಿಂಬರ್ಗಾ ಗ್ರಾಮದಲ್ಲಿ ಮೂರು ಶಾಸನಗಳು ದೊರೆತಿವೆ. ಕ್ರಿ.ಶ 1044 ಮತ್ತು ಕ್ರಿ.ಶ 1045ರ ಶಾಸನಗಳಲ್ಲಿ ಗ್ರಾಮದ ಬಗ್ಗೆ ಉಲ್ಲೇಖಿಸಲಾಗಿದೆ. ಕಲ್ಯಾಣಿ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಮಿಶ್ರ ಶೈಲಿಯ ವಾಸ್ತುಶಿಲ್ಪಗಳು ಕಂಡುಬರುತ್ತವೆ. ಮಹಾದೇವ, ಈಶ್ವರ ಮತ್ತು ಕಲ್ಮೇಶ್ವರ ದೇವಾಲಯಗಳಿವೆ. ಮಹಾದೇವ ದೇವಾಲಯದಲ್ಲಿ ತ್ರಿಲಿಂಗಗಳಿವೆ, ಈ ಗ್ರಾಮವು ಪ್ರಾಚೀನ ಕಾಲದಲ್ಲಿ ಅಗ್ರಹಾರವು(ಶೈಕ್ಷಣಿಕ ಕೇಂದ್ರ) ಆಗಿತ್ತು. ಇಲ್ಲಿ ಕಲೆ, ಸಾಹಿತ್ಯ, ಸಂಗೀತ, ನೃತ್ಯ ವಿಜೃಂಭಿಸಿದ್ದವು. ಹೀಗೆ ನಿಂಬರ್ಗಾವು ಆರ್ಥಿಕ, ಶೈಕ್ಷಣಿಕ, ವಾಣಿಜ್ಯ, ಸಾಂಸ್ಕೃತಿಕ ಕೇಂದ್ರವಾಗಿ ನಾಡಿಗೆ ತನ್ನದೆಯಾದ ಕೊಡುಗೆ ನೀಡಿದೆ ಎಂದು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ನಮ್ಮ ಬಳಗದ ವತಿಯಿಂದ ಕಳೆದ ಒಂದು ವರ್ಷದಿಂದ ಜಿಲ್ಲೆಯ ಐತಿಹಾಸಿಕ ಸ್ಥಳ ಪರಿಚಯಾತ್ಮಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದೆವೆ. ಸ್ಥಳಿಯ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ನೆಲದ ಮಹಿಮೆ ಅರಿತುಕೊಳ್ಳುವುದು ಅವಶ್ಯಕವಾಗಿದೆ. ಆಳಂದ ಪಟ್ಟಣವು ಸಾವಿರ ಹಳ್ಳಿಗಳಿಗೆ ಮುಖ್ಯ ಕೇಂದ್ರವಾಗಿ ‘ಸಾಸಿರ ನಾಡು’ ಎಂದು ಖ್ಯಾತಿ ಹೊಂದಿತ್ತು. ನಮ್ಮ ನೆಲ ಶ್ರೇಷ್ಟವಾಗಿದ್ದು, ಇದರ ಬಗ್ಗೆ ಜಾಗೃತಿ, ಇಲ್ಲಿನ ಸ್ಮಾರಕಗಳ ರಕ್ಷಣೆ ಮಾಡುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಡಾ.ರಾಜಶೇಖರ ಪಾಟೀಲ ಹೆಬಳಿ, ಗ್ರಾಮಸ್ಥರಾದ ಮಲ್ಲಿನಾಥ ಮೆಟೆಕಾರ, ಆಕಾಶ ಪೊಲೀಸ್ ಪಾಟೀಲ, ಕಿರಣ ಹೊಸಮನಿ, ದೊಡ್ಡಪ್ಪ ಹೊನಗೊಂಡ್, ಮುತ್ತುರಾಜ ಬುಳ್ಳಾ, ಅಶೋಕ ಹೂಗಾರ, ಪಾರ್ಶಾ ಪಟೇಲ್, ಮಂಜುನಾಥ ಹೂಗಾರ, ಶರಣಬಸಪಪ್ ಪೊಲೀಸ್ ಪಾಟೀಲ್ ಸೇರಿದಂತೆ ಅನೇಕರು ಇದ್ದರು.