ಕಲಬುರಗಿ: ರಾಜ್ಯ ಸರ್ಕಾರವು ವಿವಿಧ ಅಕಾಡೆಮಿಗಳ ಮೂಲಕ ನೀಡುತ್ತಿರುವ ಪ್ರಶಸ್ತಿಗಳಲ್ಲಿ ಕಲ್ಯಾಣ ಕರ್ನಾಟಕದವರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಸಂಸ್ಕೃತ ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಬೇಸರ ವ್ಯಕ್ತಪಡಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಅಥವಾ ಉತ್ತರ ಕರ್ನಾಟಕ ಭಾಗದವರಿಗೆ ಪ್ರಶಸ್ತಿಗಳಲ್ಲಿ ಸಿಕ್ಕ ಆದ್ಯತೆ ಇಲ್ಲಿಯವರಿಗೆ ಸಿಗುತ್ತಿಲ್ಲ. ಈ ಭಾಗದ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ನಾಲ್ಕು ದಶಕಗಳಿಂದ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ ಬಂದಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ. ಸರ್ಕಾರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಿಂತ ಅತಿ ಹೆಚ್ಚಿನ ಶ್ರೀಮಂತಿಕೆಯಿಂದ ಗುಲಬರ್ಗಾ ವಿ.ವಿ ಪ್ರಶಸ್ತಿ ಪ್ರದಾನ ಸಮಾರಂಭ ಕೂಡಿದೆ ಎಂದರು.
ಸರ್ಕಾರದ ಅಕಾಡೆಮಿ ಪ್ರಶಸ್ತಿಗಳು ಅನುಸರಿಸುವ ಮಾನದಂಡವನ್ನೇ ಇಲ್ಲಿಯೂ ಅಳವಡಿಸಲಾಗಿದ್ದು, ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರಶಸ್ತಿ ನೀಡುವ ಮೂಲಕ ಪಾರದರ್ಶಕ ಮಾನದಂಡ ಅನುಸರಿಸಲಾಗಿದೆ ಎಂದು ಶ್ಲಾಘಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಈ.ಟಿ ಪುಟ್ಟಯ್ಯ ಮಾತನಾಡಿ, ಸಾಹಿತ್ಯ ರಚನೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಎಲ್ಲರಿಗೂ ತಿಳಿಯುವಂತೆ ಸಾಹಿತ್ಯ ಸೃಷ್ಟಿ ಮಾಡುವುದು ಸವಾಲಿನ ಕೆಲಸ. ಜಿ.ಎಸ್ ಶಿವರುದ್ರಪ್ಪನವರ ಕವಿತೆಗಳು, ಜಾನಪದ ಕಥನಗಳು ಎಲ್ಲರಿಗೂ ಅರ್ಥವಾಗುವಷ್ಟು ಸರಳವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳ ಪಠ್ಯಗಳಲ್ಲಿನ ಕನ್ನಡ ಪದಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ.ಜಿ ಶ್ರೀರಾಮುಲು, ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಟಿ ಪೋತೆ ಮಾತನಾಡಿದರು.
ಪ್ರಭಾರ ಕುಲಸಚಿವ ಪ್ರೊ.ರಮೇಶ ಲಂಡನಕರ್, ಕುಲಸಚಿವೆ (ಮೌಲ್ಯಮಾಪನ) ಮೇಧಾವಿನಿ ಕಟ್ಟಿ, ಸಿಂಡಿಕೇಟ್ ಸದಸ್ಯ ಎಸ್.ಪಿ ಸುಳ್ಳದ, ಪ್ರಾಧ್ಯಾಪಕ ಪ್ರೊ. ರಾಜನಾಳ್ಕರ್ ಲಕ್ಷ್ಮಣ ವೇದಿಕೆಯಲ್ಲಿದ್ದರು.
ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸಾಹಿತಿ ಸಿದ್ದರಾಮ ಹೊನ್ಕಲ್, ಗುಲಬರ್ಗಾ ವಿ.ವಿ ಕುಲಪತಿಗಳಾಗಿದ್ದ ಹಾ.ಮಾ ನಾಯಕ ಅವರು ಆರಂಭಿಸಿದ ರಾಜ್ಯೋತ್ಸವ ಪ್ರಶಸ್ತಿ ನಾಲ್ಕು ದಶಕಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ. ಈ ವಿ.ವಿ.ಯಿಂದ ನನಗೆ ಇದುವರೆಗೆ 10 ಬಾರಿ ಪ್ರಶಸ್ತಿಗಳು ಬಂದಿವೆ. ಕಲ್ಯಾಣ ಕರ್ನಾಟಕದ ಸಾಧಕರನ್ನು ಗುರುತಿಸುತ್ತಿರುವದು ಶ್ಲಾಘನೀಯ. ಈ ಪರಂಪರೆ ಇನ್ನೂ ಮುಂದುವರಿಯಲಿ ಎಂದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಲ್ಲೇಶಪ್ಪ ಸಿದ್ರಾಂಪೂರ, ಸುಜಾತಾ ಚಲವಾದಿ ಮಾತನಾಡಿದರು.
ಡಾ.ಪಿ.ಎಸ್ ಶಂಕರ್, ಅಪ್ಪಾರಾವ ಅಕ್ಕೋಣೆ, ಎಸ್.ಎಸ್ ಜಂಗೆ, ವೀರೇಂದ್ರ ರಾವಿಹಾಳ್, ಅರುಣಾ ನರೇಂದ್ರ, ಪ್ರೊ. ವಿ. ಮೋಹನ್ ಕುಂಟಾರ್, ಚಾಂದ್‌ಪಾಷಾ, ಸಿದ್ದಲಿಂಗಪ್ಪ ಕೊಟ್ನೇಕಲ್, ಚಿ.ಸಿ ನಿಂಗಣ್ಣ, ಸೂರ್ಯಕಾಂತ ಸುಜ್ಯಾತ್, ಭೀಮಸಿಂಗ್ ರಾಠೋಡ, ಭಾಗ್ಯಜ್ಯೋತಿ ಹಿರೇಮಠ ಸೇರಿದಂತೆ ಹಲವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜನಪದ ಕಲಾವಿದನಿಗೆ ಭಾರಿ ಚಪ್ಪಾಳೆ
ಗುಲಬರ್ಗಾ ವಿ.ವಿ ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಾವ ಲೇಖಕರಿಗೂ ಬಾರದಷ್ಟು ಚಪ್ಪಾಳೆ ಜನಪದ ಕಲಾವಿದ ದೇವಿಂದ್ರಪ್ಪ ಮಾಪಣ್ಣ ಸಜ್ಜನ ಅವರಿಗೆ ಬಂದವು. ಸಾಂಪ್ರದಾಯಿಕ ಶೈಲಿಯ ಧೋತರ ನೆಹರೂ ಅಂಗಿ, ಗಾಂಧಿ ಟೋಪಿ ಧರಿಸಿ ಬಂದಿದ್ದ ದೇವಿಂದ್ರಪ್ಪ ಅವರ ಹೆಸರನ್ನು ಘೋಷಿಸುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಕರತಾಡನ ಶುರುವಾಯಿತು. ಚಪ್ಪಾಳೆಯ ಸದ್ದು ಕೇಳಿಸಿಕೊಂಡ ದೇವಿಂದ್ರಪ್ಪ ಅವರು ಪುಳಕಗೊಂಡರು.