ಕಲಬುರಗಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿ ದೆಸೆಯಿಂದ ಪರಿಸರ ಪ್ರಜ್ಞೆ ಬೆಳೆಸಿಕೊಂಡು, ಪರಿಸರ ಸಂರಕ್ಷಣೆ ಮಾಡುವುದರ ಜೊತೆಗೆ ಬೇರೊಬ್ಬರಿಗೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕುಸನೂರ ಗ್ರಾ.ಪಂ ಅಧ್ಯಕ್ಷ ಕುಪೇಂದ್ರ ಬರಗಾಲಿ ಹೇಳಿದರು.
ನಗರದ ಸಮೀಪದ ಕುಸನೂರ ಗ್ರಾಮದ ಗವಿಸಿದ್ದೇಶ್ವರ ದೇವಸ್ಥಾನದಲ್ಲಿ ಹಿಂಗುಲಾಂಬಿಕಾ ಬಿ.ಎಡ್ ಕಾಲೇಜಿನ ಒಂದು ವಾರದ ಎನ್.ಎಸ್.ಎಸ್ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಉಳಿದರೆ ಮಾತ್ರ ಸಕಲ ಜೀವಿಗಳು ಉಳಿಯಲು ಸಾಧ್ಯ ಎಂದರು.
ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ ಪಾಟೀಲ ಮಾತನಾಡಿ, ಇಂದಿನ ವಿದ್ಯಾರ್ಥಿಗಳು, ನಾಳಿನ ನಾಗರಿಕರಾಗಿರುವದರಿಂದ, ವಿದ್ಯಾರ್ಥಿ ದೆಸೆಯಿಂದಲೇ, ಶಿಸ್ತು, ರಾಷ್ಟ್ರೀಯ ಪ್ರಜ್ಞೆ, ಮಾನವೀಯ ಹಾಗೂ ನೈತಿಕ ಮೌಲ್ಯ, ಸಮಯಪ್ರಜ್ಞೆ, ಬದ್ದತೆ, ಜವಾಬ್ದಾರಿ, ಪ್ರಾಮಾಣಿಕತೆ, ನಿಶ್ಚಿತ ಗುರಿ, ನಿರಂತರ ಪ್ರಯತ್ನದಂತಹ ಮುಂತಾದ ಗುಣಗಳು ಬೆಳೆಯಬೇಕು ಎಂಬ ಧ್ಯೇಯೋದ್ದೇಶದಿಂದ ಮಹಾತ್ಮ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದ ಅವರ ತತ್ವ ಒಳಗೊಂಡ ರಾಷ್ಟ್ರೀಯ ಸೇವಾ ಯೋಜನೆಯನ್ನು 1969ರಲ್ಲಿ ಜಾರಿಗೊಳಿಸಲಾಗಿದೆ. ಇಂತಹ ಗುಣಗಳನ್ನು ಬೆಳೆಸಿ ಭವಿಷ್ಯದಲ್ಲಿ ಶ್ರೇಷ್ಠ ನಾಯಕರಾಗಲು, ದೇಶ ಕಟ್ಟುವ ಕಾರ್ಯ ಮಾಡುವಲ್ಲಿ ಎನ್.ಎಸ್.ಎಸ್ ಕೊಡುಗೆ ಅನನ್ಯವಾಗಿದೆ ಎಂದರು.
ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ವಿಶೇಷ ಉಪನ್ಯಾಸ ನೀಡಿದ ಅವರು, ಎನ್.ಎಸ್.ಎಸ್ ಉನ್ನತ ವ್ಯಕ್ತಿತ್ವ ನಿರ್ಮಾಣದ ಬಗೆಯನ್ನು ಅರಿತು, ದೇಶಸೇವೆ ಮಾಡಲು ಪ್ರೇರಣೆ ನೀಡುತ್ತದೆ. ವಿದ್ಯಾರ್ಥಿಗಳು ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎನ್.ಎಸ್.ಎಸ್ ಧ್ಯೇಯೋದ್ಧೇಶ ತಿಳಿದುಕೊಂಡು ಅದರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪರಿಸರ ಕಾಪಾಡಲು ಶ್ರಮಿಸಬೇಕು ಮತ್ತು ಜನ ಜಾಗೃತಿ ಮೂಡಿಸಬೇಕು ಎಂದು ಅನೇಕ ದೃಷ್ಟಾಂತಗಳೊಂದಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಗೀತಾ ಮೋರೆ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಕುಸನೂರ ಗಾಪಂ ಸದಸ್ಯರಾದ ರಮೇಶ ಎಂ.ತೆಗ್ಗಿನಮನಿ, ರೇವಣಸಿದ್ದಯ್ಯ ಸ್ವಾಮಿ, ಆತ್ಮಾನಂದ ಶಿವಕೇರಿ, ಕಾಲೇಜಿನ ಮೇಲ್ವಿಚಾರಕಿ ಅರುಣಾ ಗಡಾಳೆ, ಎನ್.ಎಸ್.ಎಸ್ ಸಂಯೋಜನಾಧಿಕಾರಿ ವಸಂತಕುಮಾರ ರಾಠೋಡ ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕ ರಮೇಶ ಬಿ.ಯಾಳಗಿ ನಿರ್ವಹಿಸಿದರು, ಶಿಬಿರಾರ್ಥಿ ವಿದ್ಯಾಲಕ್ಷ್ಮಿ ಪ್ರಾರ್ಥಿಸಿದರು, ಅನೀಲಕುಮಾರ ಪವಾರ ಸ್ವಾಗತಿಸಿದರು, ರಾಜಕುಮಾರ ನಿರೂಪಿಸಿದರು, ಸುನೀಲ ದೊಡ್ಡಮನಿ ವಂದಿಸಿದರು.